

ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಮತ್ತೆ ಹೆಚ್ಚುವರಿ ತೆರಿಗೆ ವಿಧಿಸುವ ಎಚ್ಚರಿಕೆ ನೀಡಿದ್ದಾರೆ. ‘ಅಮೆರಿಕದ ಕೆಲವು ವಸ್ತುಗಳ ಆಮದಿಗೆ ಭಾರತ ವಿಧಿಸಿರುವ ಹೆಚ್ಚಿನ ಸುಂಕಕ್ಕೆ ಪ್ರತಿಯಾಗಿ ಅಷ್ಟೇ ಮೊತ್ತದ ಸಂಕ ವಿಧಿಸಲಾಗುವುದು’ ಎಂದಿರುವ ಅವರು, ಭಾರತ ಮತ್ತು ಬ್ರಿಜೆಲ್ ಅಮೆರಿಕದ ವಸ್ತುಗಳಿಗೆ ಹೆಚ್ಚಿನ ಸುಂಕ ವಿಧಿಸುತ್ತಿವೆ ಎಂದೂ ಆರೋಪಿಸಿದ್ದಾರೆ.
ಜನವರಿ 20ರಂದು ಅಧಿಕಾರ ಸ್ವೀಕರಿಸಲಿರುವ ಟ್ರಂಪ್ ‘ಭಾರತವನ್ನು ಆಪ್ತಸ್ನೇಹಿತ’ ಎಂದು ಹೇಳುತ್ತಲೇ ದ್ವಂದ್ವ ನೀತಿ ಅನುಸರಿಸುವುದು ಸೂಕ್ತವಲ್ಲ. ಕೆಲವು ವಿಷಯಗಳ ಬಗ್ಗೆ ಗೊಂದಲ, ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ದ್ವಿಪಕ್ಷೀಯ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಬೆದರಿಕೆಯ ದನಿಯಲ್ಲಿ ಮಾತನಾಡುವುದು ಸರಿಯಾದ ಕ್ರಮವಲ್ಲ. ಟ್ರಂಪ್ ತಮ್ಮ ಮೊದಲ ಅವಧಿಯಲ್ಲೂ ( 2017-2021) ಗಡಿಬಿಡಿಯ, ಅವಾಸ್ತವಿಕ ಹಾಗೂ ವಿವಾದಾತ್ಮಕ ನಿರ್ಧಾರಗಳಿಂದಲೇ ಸುದ್ದಿಯಾದವರು ಎಂಬುದನ್ನು ಮರೆಯುವಂತಿಲ್ಲ. ಭಾರತ-ಅಮೆರಿಕದ ಸಂಬಂಧ ದಿನಕಳೆದಂತೆ ಸಂಕೀರ್ಣವಾಗುತ್ತಿದೆ ಎಂಬುದನ್ನು ಅವರು ಗಮನಿಸಬೇಕಿದೆ. ಸಿಖ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ ನಡೆದ ಯತ್ನದಲ್ಲಿ ಭಾರತದ ಅಧಿಕಾರಿಗಳ ಕೈವಾಡವಿದೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಆರೋಪಿಸಿತ್ತು. ಹೀಗೆ ಆಧಾರರಹಿತವಾಗಿ ಮತ್ತೊಂದು ರಾಷ್ಟ್ರದ ವರ್ಚಸ್ಸಿಗೆ ಹಾನಿ ಉಂಟುಮಾಡುವ ಅಧಿಕಾರ ಅಮೆರಿಕಕ್ಕಿಲ್ಲ. ಈ ಮಧ್ಯೆ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಭಾರತದ ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕದ ನ್ಯಾಯಾಲಯವೊಂದರಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.
‘ಸಂಬಂಧಗಳು ಹೆಚ್ಚು ಸಂಕೀರ್ಣ, ವೈವಿಧ್ಯಮಯ ಮತ್ತು ಆಳವಾಗಿವೆ. ಎರಡೂ ಕಡೆಯಿಂದ ಸವಾಲುಗಳಿವೆ. ಅದನ್ನು ನಾವು ಹೇಗೆ ಎದುರಿಸುತ್ತೇವೆ ಎನ್ನುವುದು ಮುಖ್ಯ’ ಎಂದು ಅಮೆರಿಕದ ಹಿರಿಯ ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ. ವಿದೇಶಾಂಗ ನೀತಿಯಲ್ಲಿ ಸ್ನೇಹಿತನಂತೆ ವರ್ತಿಸಿ, ದ್ವೇಷ ಸಾಧಿಸುವ ಮಾರ್ಗಕ್ಕೆ ಅವಕಾಶವೇ ಇಲ್ಲ. ಭಾರತದ ಜತೆ ಸ್ನೇಹಿತನಂತೆ ವರ್ತಿಸುತ್ತಲೇ ಅಮೆರಿಕ ಭಾರತದ ಹಿತಕ್ಕೆ ಮಾರಕವಾದ ಅನೇಕ ನೀತಿಗಳನ್ನು ಅನುಸರಿಸುತ್ತಲೇ ಬಂದಿದೆ ಎಂಬುದು ರಹಸ್ಯವೇನಲ್ಲ. ಬಾಂಗ್ಲಾದೇಶದಲ್ಲಿನ ಆಡಳಿತ ಬದಲಾವಣೆ, ಹಿಂಸೆಯ ಹಿಂದೆಯೂ ಅಮೆರಿಕದ ಕೈವಾಡವಿದೆ ಎಂಬುದು ಗೊತ್ತಿರುವಂಥದ್ದೇ. ಭ್ರಷ್ಟಾಚಾರ, ನಿರುದ್ಯೋಗ, ಬೆಲೆಯೇರಿಕೆಯಂಥ ಆಂತರಿಕ ಸಮಸ್ಯೆಗಳಿಂದ ಅಮೆರಿಕ ನಲಗುತ್ತಿರುವುದು ಆ ರಾಷ್ಟ್ರ ಸಂಕಷ್ಟದ ಹಾದಿಯಲ್ಲಿದೆ ಎಂಬುದಕ್ಕೆ ಸಾಕ್ಷಿ. ಹೀಗಾಗಿ ಟ್ರಂಪ್ ‘ಅಮೆರಿಕ ಮೊದಲು’ ನೀತಿಯನ್ನು ಅನುಸರಿಸುವುದು ತಪ್ಪಲ್ಲ. ಆದರೆ, ಆ ನಿಟ್ಟಿನಲ್ಲಿ ಸ್ನೇಹಿತ ರಾಷ್ಟ್ರಗಳಿಗೆ ದ್ರೋಹ ಬಗೆಯುವುದು ಅಥವಾ ಅವುಗಳೊಂದಿಗೆ ಕಠಿಣವಾಗಿ ನಡೆದುಕೊಳ್ಳುವುದು ಸೂಕ್ತವಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಶಕ್ತಿ, ವರ್ಚಸ್ಸು ಹೆಚ್ಚಾಗಿರುವುದರಿಂದಲೇ ಅಮೆರಿಕ ನಮ್ಮ ರಾಷ್ಟ್ರದತ್ತ ಸ್ನೇಹಹಸ್ತ ಚಾಚಿದೆ. ಈ ಸ್ನೇಹವನ್ನು ಪ್ರಾಮಾಣಿಕವಾಗಿ ಮುಂದುವರಿಸಿಕೊಂಡು ಹೋಗಬೇಕು. ವಿವಾದಗಳನ್ನು ಸೃಸ್ಟಿಸುವ ಬದಲು ರಾಜತಾಂತ್ರಿಕ ಸಹಕಾರ, ಸಂಬಂಧ ಹೊಸ ಎತ್ತರಕ್ಕೆ ತಲುಪಿದರೆ, ಅದರಿಂದ ಎರಡೂ ರಾಷ್ಟ್ರಗಳಿಗೆ ಹಿತ. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಟ್ರಂಪ್ ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸುವುದು ಅಗತ್ಯ.