ಡ್ರೋನ್​ ಸರ್ವೇ ಎಲ್ಲ ಜಿಲ್ಲೆಗೂ ವಿಸ್ತರಣೆ: 2-3ನೇ ಹಂತದಲ್ಲಿ 26 ಜಿಲ್ಲೆಗಳ ಸಮೀಕ್ಷೆ

drone
Published on

| ಗಂಗಾಧರ್​ ಬೈರಾಪಟ್ಟಣ ರಾಮನಗರ

ರಾಜ್ಯದ 5 ಜಿಲ್ಲೆಗಳಲ್ಲಿ ಈಗಾಗಲೇ ಡ್ರೋನ್​ ಸರ್ವೇ ಮೂಲಕ ಗ್ರಾಮೀಣ ಮತ್ತು ನಗರ ಪ್ರದೇಶದ ವಸತಿ ಹಾಗೂ ಕೃಷಿ ಭೂಮಿ ಆಸ್ತಿ ದಾಖಲೆಗಳನ್ನು ಸಿದ್ಧಪಡಿಸಿ ಮಾಲೀಕರಿಗೆ ನೀಡುವ ಯೋಜನೆ ಕೈಗೊಂಡಿರುವ ರಾಜ್ಯ ಸರ್ಕಾರ, ಉಳಿದ 26 ಜಿಲ್ಲೆಗಳಿಗೂ ಇದನ್ನು ವಿಸ್ತರಿಸಿ, 287 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ರಾಮನಗರ, ತುಮಕೂರು, ಹಾಸನ, ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸರ್ವೇ ಕಾರ್ಯ ನಡೆಯುತ್ತಿದೆ.

ಈ ಜಿಲ್ಲೆಗಳ 51 ಸಾವಿರ ಚದರ ಕಿ.ಮೀ. ಭೂ ಪ್ರದೇಶವನ್ನು ಭಾರತೀಯ ಸರ್ವೇಕ್ಷಣಾ ಸಂಸ್ಥೆಯೊಂದಿಗೆ ಸರ್ವೇ ಕೈಗೊಳ್ಳಲಾಗಿದೆ. ಸರ್ವೇ ಆಫ್​ ಇಂಡಿಯಾ ರಾಜ್ಯದಲ್ಲಿ ಕೇವಲ 10 ಡ್ರೋನ್​ಗಳನ್ನು ಸರ್ವೇ ಕಾರ್ಯಕ್ಕೆ ನಿಯೋಜಿಸಿದ್ದು, ಪ್ರತಿ ಡ್ರೋನ್​ 3 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಮಾತ್ರ ಸರ್ವೇ ಮಾಡುತ್ತಿದೆ. ಇದನ್ನು ಉಳಿದ ಜಿಲ್ಲೆಗಳಿಗೂ ವಿಸ್ತರಿಸಲು ಮುಂದಾಗಿರುವ ಸರ್ಕಾರ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ (ಕೆಎಸ್​ಆರ್​ಎಸ್​ಸಿಎ) ಸಹಕಾರ ಪಡೆದು ರಾಜ್ಯದ 26 ಜಿಲ್ಲೆಗಳನ್ನು ತಲಾ 13ರಂತೆ ವಿಂಗಡಿಸಿ 2 ಮತ್ತು 3ನೇ ಹಂತದಲ್ಲಿ ಸರ್ವೇ ಕಾರ್ಯ ಮಾಡಲು ಯೋಜಿಸಿದೆ.

ಖಾಸಗಿ ಏಜೆನ್ಸಿಗಳ ಬಳಕೆ: ಮೊದಲ ಹಂತದ ಜಿಲ್ಲೆಗಳಲ್ಲಿ ಭಾರತೀಯ ಸರ್ವೇಕ್ಷಣಾ ಸಂಸ್ಥೆಯೊಂದಿಗೆ ನಡೆಸುತ್ತಿರುವ ಸರ್ವೇ ಕಾರ್ಯ ನಿಧಾನ ಗತಿಯಲ್ಲಿ ಸಾಗುತ್ತಿದ್ದು, ಎರಡು ಮತ್ತು ಮೂರನೇ ಹಂತದಲ್ಲಿ ಸರ್ವೇ ಮಾಡಲು ಖಾಸಗಿ ಏಜೆನ್ಸಿಗಳ ಮೂಲಕ ಡ್ರೋನ್​ಗಳ ಬಳಕೆ ಮಾಡಿಕೊಳ್ಳಲು ಅವಕಾಶ ಮಾಡಲಾಗಿದೆ. ಆಥೋರ್ ರೆಕ್ಟಿಫೈಡ್​ ಚಿತ್ರಗಳನ್ನೇ ಇಲಾಖೆಗೆ ಪಡೆಯುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಸರ್ವೇ ಕಾರ್ಯವು ಕೆಎಸ್​ಆರ್​ಎಸ್​ಸಿಎ ಮತ್ತು ಸರ್ವೇ ಆಫ್​ ಇಂಡಿಯಾ ಮೇಲ್ವಿಚಾರಣೆಯಲ್ಲೇ ನಡೆಯಲಿದೆ.

20 ಸಾವಿರ ವೆಚ್ಚ: ಡ್ರೋನ್​ ಮೂಲಕ ಸರ್ವೇ ಮಾಡಿಸಿ ದಾಖಲೆಗಳನ್ನು ಮಾಲೀಕರಿಗೆ ಹಸ್ತಾಂತರ ಮಾಡುವವರೆಗೆ ಪ್ರತಿ ಚದರ ಕಿ.ಮೀ.ಗೆ 20,500 ರೂ. ವೆಚ್ಚವಾಗಲಿದೆ. ಹಕ್ಕು ದಾಖಲೆಗಳ ಡಿಜಿಟಲೀಕರಣ, ಆಸ್ತಿ ಮಾಲೀಕರ ಮಾಲೀಕತ್ವದ ವಿಚಾರಣೆಗೆ ನೋಟಿಸ್​ ಜಾರಿಗೊಳಿಸುವುದು ಮತ್ತು ಹಕ್ಕು ದಾಖಲೆಗಳನ್ನು ವಿತರಿಸಲು ಪ್ರತಿ ಸರ್ವೇ ನಂ/ಆಸ್ತಿ ಸಂಖ್ಯೆಗೆ 75 ರೂ. ನಂತೆ 2.5 ಕೋಟಿ ಆಸ್ತಿಗಳು ಇದ್ದು, ಇವುಗಳಿಗೆ ಒಟ್ಟು 287 ಕೋಟಿ ರೂ. ವೆಚ್ಚವಾಗಲಿದೆ. ಅಂದರೆ ಪ್ರತಿ ಚದರ ಕಿ.ಮೀ.ಗೆ 20,500 ರೂ. ಆಗಲಿದೆ. ಇದು ಕೇಂದ್ರ ಸರ್ಕಾರ ಅನುಮೋದಿಸಿರುವ ದರಕ್ಕಿಂತ ಕಡಿಮೆ ಇದೆ. ಕೇಂದ್ರ ಸರ್ಕಾರ ಪ್ರತಿ ಚದರ ಕಿ.ಮೀ.ಗೆ 25,500 ರೂ. ನಿಗದಿಪಡಿಸಿದೆ.

ಜಿಲ್ಲೆಗಳು ಯಾವ ಹಂತ?

ಮೊದಲ ಹಂತದಲ್ಲಿ ರಾಮನಗರ, ತುಮಕೂರು, ಹಾಸನ, ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು. ಎರಡನೇ ಹಂತದಲ್ಲಿ ಬಾಗಲಕೋಟೆ, ಬಳ್ಳಾರಿ, ಬೀದರ್​, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಧಾರವಾಡ, ಕಲಬುರಗಿ, ಹಾವೇರಿ, ಮೈಸೂರು, ಉಡುಪಿ, ಯಾದಗಿರಿ, ಶಿವಮೊಗ್ಗ, ಕೋಲಾರ ಜಿಲ್ಲೆಗಳು ಹಾಗೂ ಮೂರನೇ ಹಂತದಲ್ಲಿ ದಾವಣಗೆರೆ, ಬೆಂಗಳೂರು ನಗರ, ಗ್ರಾಮಾಂತರ, ವಿಜಯಪುರ, ಚಾಮರಾಜ ನಗರ, ಚಿಕ್ಕಮಗಳೂರು, ಚಿತ್ರದುರ್ಗ, ಗದಗ, ಕೊಡಗು, ಕೊಪ್ಪಳ, ಮಂಡ್ಯ, ರಾಮಚೂರು, ವಿಜಯನಗರಗಳು ಸೇರಿವೆ.

ಕಾರ್ಯಕ್ರಮ ಅಂದಾಜು

ಜಿಲ್ಲೆಗಳ ಹಂತ      ಸಮೀಕ್ಷೆ ಆರಂಭ      ಅಂತಿಮ          ದಾಖಲೆಗಳ ವಿತರಣೆ

ಮೊದಲ ಹಂತ      ಹಾಲಿ ಚಾಲ್ತಿಯಲ್ಲಿ     ಮಾ. 2023    ಜೂ.2023

ಎರಡನೇ ಹಂತ     ಫೆ. 2022          ಮಾ. 2023    ಜೂ.2023

ಮೂರನೇ ಹಂತ    ಅ. 2022           ಜ. 2024      ಮಾ. 2024

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net