ಮತ್ತೆಲ್ಲಿಯೂ ಕಾಣಸಿಗದ ಸ್ವಪ್ನದಂತಹ ಕ್ರೂರದೃಶ್ಯಗಳು

ವಿಜಯವಾಣಿ-9
Published on

ಶ್ರೀರಾಮನು ಶ್ರೀವಸಿಷ್ಠರ ಯುದ್ಧ ವರ್ಣನೆಯನ್ನು ಆಲಿಸಿ ಕೇಳುತ್ತಿದ್ದಾನೆ. ಯೋಗವಾಸಿಷ್ಠದ ಯುದ್ಧ ವರ್ಣನೆಯನ್ನು ಓದುವಾಗ ಪ್ರಾಚೀನಕಾಲದ ಭಾರತದೇಶದ ಯುದ್ಧಗಳು ಎಷ್ಟು ಶಿಸ್ತಿನಿಂದ ಎಷ್ಟು ನಿಯಮಬದ್ಧವಾಗಿ ನಡೆಯುತ್ತಿದ್ದವು ಎಂಬುದು ಗೊತ್ತಾಗುತ್ತದೆ. ಪ್ರಪಂಚದ ಬೇರೆ ದೇಶಗಳಲ್ಲಿ ಶಿಲಾಯುಗ ಇದ್ದ ಕಾಲದಲ್ಲಿ ಭಾರತದಲ್ಲಿ ಸ್ವರ್ಣಯುಗವಿತ್ತು. ಆಗ ಬೇರೆ ದೇಶದ ಜನರು ಕಲ್ಲುಬಂಡೆಗಳಿಂದಲೇ ಯುದ್ಧಮಾಡಿಕೊಳ್ಳುತ್ತಿದ್ದರು. (ಇದನ್ನು ಬಹುಶಃ ಯುದ್ಧವೆಂದು ಕರೆಯುವುದಕ್ಕಿಂತಲೂ ಕಚ್ಚಾಟವೆಂದು ಕರೆಯುವುದು ಸೂಕ್ತವಾಗಬಹುದು.) ಆದರೆ ಅದೇ ವೇಳೆಗೆ ಭಾರತದಲ್ಲಿ ಬಂಗಾರದ ಪುಂಖಗಳಿರುವ ಬಾಣಗಳಿಂದ ಯುದ್ಧಮಾಡಿಕೊಳ್ಳುತ್ತಿದ್ದರು. ಬಿಲ್ಲು-ಬಾಣಗಳ ವ್ಯವಸ್ಥಿತ ಪ್ರಯೋಗದ ಒಂದು ಶಾಸ್ತ್ರವೇ ಆಗ ನಮ್ಮಲ್ಲಿತ್ತು. ಅದುವೇ ಧನುರ್ವೆದ. ನನಗೆ ತಿಳಿದಂತೆ ಪ್ರಪಂಚದ ಬೇರೆ ದೇಶಗಳಲ್ಲಿ ಬಿಲ್ಲು-ಬಾಣಗಳ ಪ್ರಯೋಗ ಇದ್ದದ್ದು ಇತಿಹಾಸದಲ್ಲಿ ಕಂಡುಬರುವುದಿಲ್ಲ. ಯೋಗವಾಸಿಷ್ಠದಲ್ಲಿ ಬಿಲ್ಲು-ಬಾಣಗಳ ಹೊರತಾಗಿ ಇನ್ನೂ ಅನೇಕ ಆಯುಧಗಳ ಮತ್ತು ಯಂತ್ರಗಳ ಉಲ್ಲೇಖವಿರುವುದು ಗಮನಾರ್ಹ. ಬಹುಶಃ ಪ್ರಾಚೀನಕಾಲದ ಯುದ್ಧಗಳ ಬಗ್ಗೆ ಒಂದು ಸಂಶೋಧನಾ ಪ್ರಬಂಧ ಬಂದರೆ, ಅದರಲ್ಲಿ ಯೋಗವಾಸಿಷ್ಠದ ಸ್ಥಾನವು ಮಹತ್ವವುಳ್ಳದ್ದಾಗುತ್ತದೆ. ಅಷ್ಟೊಂದು ಮಾಹಿತಿಗಳು ಇಲ್ಲಿ ಸಂಗ್ರಹಗೊಂಡಿವೆ.

ಯುದ್ಧ ವರ್ಣನೆಯನ್ನು ಶ್ರೀ ವಸಿಷ್ಠರು ಮುಂದುವರಿಸುತ್ತಿದ್ದಾರೆ- ‘ಶ್ರೀರಾಮ! ಈ ಯುದ್ಧದಲ್ಲಿ ಆಯುಧಗಳಿಂದ ತುಂಡರಿಸಲ್ಪಟ್ಟ ಛತ್ರಗಳು, ಚಾಮರಗಳು ಮತ್ತು ಪತಾಕೆಗಳು ಆಕಾಶವೆಂಬ ಗದ್ದೆಯಲ್ಲಿ ನೆಡಲ್ಪಟ್ಟ ಯಶಸ್ಸೆಂಬ ಭತ್ತದ ಗಿಡಗಳಂತೆ ಕಾಣುತ್ತಿದ್ದವು’. ಒಬ್ಬ ದೂರದಿಂದ ನೋಡುತ್ತಿದ್ದ ವ್ಯಕ್ತಿ ತನ್ನ ಪಕ್ಕದಲ್ಲಿದ್ದವನಿಗೆ ಹೇಳುತ್ತಿದ್ದಾನೆ -‘ಗೆಳೆಯ! ನೀನು ಕ್ಷೇಮವಾಗಿದ್ದೀಯ ತಾನೆ? ಅಲ್ಲಿ ನೋಡು, ಬಾಣಪ್ರಯೋಗ ಗಳ ಚಮತ್ಕಾರವನ್ನು ನೋಡು. ಶಕ್ತಾಯುಧಗಳು ರಾಶಿಯು ಒಂದುಕಡೆಯಿಂದ ಆಕಾಶದಲ್ಲಿ ಬರುತ್ತಿದ್ದರೆ, ಇನ್ನೊಂದು ಕಡೆಯಿಂದ ಗುಂಪಾಗಿ ಬರುತ್ತಿರುವ ಬಾಣಗಳು, ಅವುಗಳನ್ನು ಎತ್ತಿಕೊಂಡು ಹೋಗಿ ನಾಶಪಡಿಸುತ್ತಿವೆ. ಪತಂಗಗಳು (ಮಿಡತೆ ಗಳು) ಗುಂಪಾಗಿ ಫಲಭರಿತ ಸಸ್ಯಗಳನ್ನು ಆಕ್ರಮಿಸಿ, ಅವುಗಳನ್ನು ನಾಶಪಡಿಸುತ್ತಿರುವಂತೆ ಈ ದೃಶ್ಯ ಕಾಣಿಸುತ್ತಿದೆ’.

‘ಭಟರು ದೀರ್ಘವಾಗಿ ಬಾಹುಗಳನ್ನು ಬೀಸಿ, ಖಡ್ಗಗಳನ್ನು ಪ್ರಯೋಗಿಸುತ್ತಿರುವುದರಿಂದ ಎದುರಾಳಿಯ ಕಠಿಣವಾದ ಕವಚ ಗಳ ಮೇಲೆ ಏಟುಗಳು ಬಿದ್ದು ‘ಛಟ್ ಛಟ್’ ಎಂಬ ಕ್ರೂರ ಶಬ್ದ ಕೇಳಿಬರುತ್ತಿದೆ. ಈ ಶಬ್ದವು ಮೃತ್ಯುವಿನ ‘ಹುಂ’ಕಾರವೇ ಆಗಿದೆ. (ಈ ರೀತಿ ಆಕ್ರಮಣಕ್ಕೆ ಒಳಪಟ್ಟ ಸೈನಿಕರು ಸದ್ಯದಲ್ಲಿಯೇ ಮೃತ್ಯು ವಿಗೆ ಒಳಪಡುತ್ತಾರೆ.) ‘ಪ್ರಪಂಚದ ಪ್ರಳಯಕಾಲದ ತೀವ್ರ ಚಂಡಮಾರುತಗಳಿಗೆ ನೀರಿನ ಝುರಿಗಳಿಂದ ಕೂಡಿದ ಗುಡ್ಡಗಳು ಭಗ್ನಗೊಳ್ಳುತ್ತವೆ. ಅದೇ ರೀತಿಯಲ್ಲಿ ಜನಸಮೂಹದ ಕ್ಷಯಕಾಲದಲ್ಲಿ (ಯುದ್ಧದಲ್ಲಿ) ದಂತಗಳೆಂಬ ಝುರಿಗಳಿಂದ ಕೂಡಿರುವ ಆನೆಗಳೆಂಬ ಗುಡ್ಡಗಳು ಆಯುಧವೆಂಬ ಚಂಡಮಾರುತದಿಂದ ಭಗ್ನಗೊಂಡು ಬೀಳುತ್ತಿವೆ. (ಗುಡ್ಡಗಳಲ್ಲಿರುವ ನೀರಿನ ಝುರಿಗಳು ಬಿಳುಪಾಗಿರುವುದರಿಂದ ಮತ್ತು ಹೊರಚಾಚಿದಂತೆ ಕಂಡುಬರುವುದರಿಂದ ಆನೆಗಳ ದಂತಗಳಿಗೆ ಗುಡ್ಡದ ಝುರಿಗಳನ್ನು ಹೋಲಿಕೆಯಾಗಿ ಕೊಟ್ಟಿದ್ದಾರೆ.)’

‘ರಕ್ತಸಿಕ್ತವಾದ ಯುದ್ಧರಂಗ ದಲ್ಲಿ ಸೈನಿಕರ ಮತ್ತು ಗಜಾಶ್ವಗಳ ಸಂಖ್ಯೆ ಕಡಿಮೆಯಾಗುತ್ತಿದೆ. ರಥಗಳ ಸಂಖ್ಯೆ ಮಾತ್ರವೇ ಬಹುತೇಕವಾಗಿ ಹಾಗೆಯೇ ಉಳಿದುಕೊಂಡಿದೆ. ಆ ರಥಗಳಾದರೋ ರಕ್ತದ ಮಡುವಿನಲ್ಲಿ ಚಕ್ರಗಳು ಸಿಲುಕಿಕೊಂಡಿದ್ದರಿಂದ ಮುಂದೆ ಚಲಿಸಲಾಗದ ಸ್ಥಿತಿಯಲ್ಲಿ ಇವೆ. ರಥದ ಒಡೆಯ, ಸಾರಥಿ ಮತ್ತು ಕುದುರೆಗಳು ಯುದ್ಧಸನ್ನದ್ಧ ಸ್ಥಿತಿಯಲ್ಲಿಯೇ ಚಲಿಸಲಾಗದೇ ನಿಂತಿವೆ. ಸುತ್ತಲಿರುವ ಸೈನಿಕರು ಖೇದದಿಂದ ಹಾಹಾಕಾರಗೈಯುತ್ತಿದ್ದಾರೆ.’ ‘ಯುದ್ಧದ ಭರದಲ್ಲಿ ಸೈನಿಕರ ಕೈಗಳಿಂದ ಮತ್ತು ಆನೆಯ ಸೊಂಡಿಲುಗಳಿಂದ ವೈರಿಸೈನಿಕರ ಕವಚಗಳ ಮೇಲೆ ಖಡ್ಗವೇ ಮೊದ ಲಾದ ಆಯುಧಗಳ ಏಟುಗಳು ಬೀಳುತ್ತಿವೆ. ಈ ಏಟುಗಳ ‘ಠಣ್ ಠಣ್’ ಶಬ್ದವನ್ನು ಕೇಳಿದರೆ ನರ್ತಿಸುತ್ತಿರುವ ಕಾಲರಾತ್ರಿಯ (ಒಂದು ಭಯಂಕರ ದೇವತೆ) ರಣವೀಣೆಯ ಶಬ್ದದಂತೆ ಕೇಳಿಸುತ್ತಿದೆ. (ಯುದ್ಧವನ್ನು ನೋಡುತ್ತಿರುವ ಒಬ್ಬನು ಜೊತೆಯಲ್ಲಿರುವ ಇನ್ನೊಬ್ಬನಿಗೆ ಹೇಳುತ್ತಿದ್ದಾನೆ-) ನೋಡು! ಮನುಷ್ಯರು, ಆನೆಗಳು, ಕತ್ತೆಗಳು ಮತ್ತು ಅಶ್ವಗಳಿಂದ ಬೀಳುತ್ತಿರುವ ರಕ್ತದ ಝುರಿಗಳನ್ನು ನೋಡಿದರೆ ತುಂಬಾ ಗಾಬರಿಯಾಗುತ್ತದೆ. ಆ ರಕ್ತಗಳ ಹನಿಗಳಿಂದ ಕೂಡಿದ ವಾತಾವರಣವನ್ನು ನೋಡಿದರೆ ದಿಕ್ಕುಗಳೇ ಕೆಂಪಾಗಿ ಕಾಣುತ್ತಿವೆ’.

‘ಕಾಳೀದೇವಿಯ ತಲೆಗೂದಲಿನಂತೆ ಕಪ್ಪಾಗಿರುವ ಆಕಾಶದಲ್ಲಿ ವಿವಿಧ ಶಸ್ತ್ರಗಳ ಕಾಂತಿಯೆಂಬ ಮೋಡಗಳಿವೆ. ಮಳೆ ಸುರಿಸುವ ಮೋಡದಂತಿರುವ ಆ ಮೋಡದಲ್ಲಿ ಬಾಣಗಳ ಸಮೂಹವೆಂಬ ಮೊಗ್ಗುಗಳ ಮಾಲೆಯು ಮಿಂಚಿನಂತೆ ಉದಯಿಸಿದೆ’.‘ಯುದ್ಧಭೂಮಿಯಲ್ಲಿ ಅಪರಿಮಿತ ರಕ್ತವು ಬಿದ್ದಿದೆ. ಆ ರಕ್ತದಿಂದ ಒದ್ದೆಯಾದ ಭೂಮಿ ಮತ್ತು ಭೂಮಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಆಯುಧಗಳನ್ನು ನೋಡಿದರೆ, ಭೂಮಿಯು ಜ್ವಲಿಸುತ್ತಿರುವ ಅಗ್ನಿಯ ಲೋಕದಂತೆ ಆಕುಲಗೊಂಡಿದ್ದು ಕಾಣುತ್ತಿದೆ. ಅಥವಾ ನಗರಕ್ಕೆ ಬೆಂಕಿ ಹೊತ್ತಿಕೊಂಡರೆ ಇಡೀ ನಗರವೇ ಶೋಕಿಸುವಂತೆ, ಅಲ್ಲಿಯ ಭೂಮಿಯ ದೃಶ್ಯ ಕಂಡುಬರುತ್ತಿತ್ತು.’‘ಸೈನಿಕರ ಕೈಗಳಿಂದ ಆಯುಧಗಳು ಹೇಗೆ ಪ್ರಯೋಗಿಸಲ್ಪಡುತ್ತಿವೆ ಎಂದರೆ, ಭುಶುಂಡಿ, ಶಕ್ತಿ, ಶೂಲ, ಖಡ್ಗ, ಮುಸಲ, ಪ್ರಾಸಗಳೆಂಬ ಆಯುಧಗಳು ಮಳೆಗರೆದಂತೆ ಎಸೆಯಲ್ಪಡುತ್ತಿವೆ. ಅವುಗಳು ಒಂದನ್ನು ಇನ್ನೊಂದು ಕತ್ತರಿಸುತ್ತಿವೆ, ಬಡಿದುಕೊಳ್ಳುತ್ತಿವೆ.’

‘ಅನೇಕ ಸೈನಿಕರು ಚಲಿಸಲು ಅಸಮರ್ಥರಾಗಿರುವಾಗ ಒಬ್ಬ ಸೈನಿಕ ಆಯುಧಗಳನ್ನು ವಿಶಿಷ್ಟವಾಗಿ ಪ್ರಯೋಗಿಸುವ ಮೂಲಕ ತನ್ನ ಶೌರ್ಯವನ್ನು ಮೆರೆಯುತ್ತಿದ್ದಾನೆ. ರಾಕ್ಷಸರ ಮಾಯೆಯಂತೆ ಇದು ಕಾಣಿಸುತ್ತಿದೆ. ಅಲ್ಲದೇ ಅಲ್ಲಿರುವ ಯೋಧರ ಕೋಪದ ಬುದ್ಧಿಯಿಂದ ತುಂಬಿಕೊಂಡಿರುವ ಕೆಂಗಣ್ಣುಗಳನ್ನು ನೋಡಿದರೆ, ಯುದ್ಧವು ಸ್ವಪ್ನದಂತೆ ಕಾಣುತ್ತಿದೆ. (ಮತ್ತೆಲ್ಲಿಯೂ ಕಾಣಸಿಗದ ಅನೇಕ ದುರ್ಲಭ ದೃಶ್ಯಗಳು ಅಲ್ಲಿ ಕಾಣುತ್ತಿವೆ.)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net