ಮಗನ ಆಸ್ತಿಯಲ್ಲಿ ವಿಚ್ಛೇದಿತ ತಾಯಿಗೆ ಪಾಲೆಷ್ಟು?

HighCourt 20 Feb 20
Published on

ನನಗೆ ಈಗ 72 ವರ್ಷ. ಹತ್ತು ವರ್ಷಗಳ ಹಿಂದೆ ನಾನು ನನ್ನ ಹೆಂಡತಿಯಿಂದ ವಿಚ್ಛೇದನ ಪಡೆದಿದ್ದೇನೆ. ಇಬ್ಬರೂ ಕೆಲಸದಲ್ಲಿದ್ದೆವು. ನಮಗಿದ್ದ ಒಬ್ಬನೇ ಅವಿವಾಹಿತ ಮಗ 30ನೇ ವಯಸ್ಸಿನಲ್ಲಿ ತೀರಿಕೊಂಡ. ನಮ್ಮ ಮಗನ ಹೆಸರಿನಲ್ಲಿ ಎರಡು ಮನೆ ಒಂದು ಸೈಟು ಇದೆ. ಬ್ಯಾಂಕಿನಲ್ಲಿ ಹಣವೂ ಇದೆ. ಮನೆ ಕೊಳ್ಳಲು ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಸ್ವಲ್ಪ ಹಣ ಕೊಟ್ಟಿದ್ದೆವು. ನನ್ನ ಮಗ ಅವನ ಹಣವನ್ನೂ ಹಾಕಿದ್ದ. ಈಗ ನನ್ನ ವಿಚ್ಛೇದಿತ ಹೆಂಡತಿ ಮಗನ ಎಲ್ಲ ಆಸ್ತಿಯೂ ಅವಳಿಗೇ ಬರಬೇಕೆಂದು ತಕರಾರು ಮಾಡುತ್ತಿದ್ದಾಳೆ. ನಾನು ಮತ್ತು ನನ್ನ ಮಗ ಅವಳಿಂದ ತುಂಬಾ ಕಷ್ಟ ಅನುಭವಿಸಿದ್ದೇವೆ. ನಾನು ಅವಳಿಗೆ ವಿಚ್ಛೇದನ ಕೊಟ್ಟ ಮೇಲೆ ಅವಳಿಗೆ ಮಗನ ಆಸ್ತಿಯಲ್ಲಿ ಭಾಗ ಹೇಗೆ ಸಿಗುತ್ತದೆ? ಅವಳಿಗೆ ಒಂದು ರೂಪಾಯಿಯೂ ಹೋಗದೇ ಇರಬೇಕಾದರೆ ನಾನು ಏನು ಮಾಡಬೇಕು?

ಮಗ ತೀರಿಕೊಂಡ ನಂತರ ಅವನ ಎಲ್ಲ ಆಸ್ತಿಗಳಿಗೆ ತಾಯಿಯೇ ಕಾನೂನಿನ ಪ್ರಕಾರ ವಾರಸುದಾರರು. ಮೃತ ಹಿಂದೂ ಪುರುಷನ ಆಸ್ತಿ , ಅವನ ಮರಣಾ ನಂತರ ಅವನ ತಾಯಿ, ಅವನ ಪತ್ನಿ ಮತ್ತು ಮಕ್ಕಳಿಗೆ ಸಲ್ಲುತ್ತದೆ. ನಿಮ್ಮ ಮಗನಿಗೆ ಮದುವೆ ಆಗಿರದೇ ಇರುವುದರಿಂದ ಆತನ ಮರಣಾ ನಂತರ ಅವನ ಚರ, ಸ್ಥಿರ ಆಸ್ತಿಗಳೆಲ್ಲ ಆತನ ತಾಯಿಗೇ ಸಲ್ಲುತ್ತದೆ. ಏಕೆಂದರೆ, ತಾಯಿಯಾದವಳು ಮೃತ ಹಿಂದೂ ಪುರುಷನ ಮೊದಲನೇ ದರ್ಜೆಯ ವಾರಸುದಾರಳಾಗಿರುತ್ತಾಳೆ. ಒಂದು ವೇಳೆ ತಾಯಿ ಮೃತಳಾಗಿದ್ದರೆ ಆಗ, ತಂದೆಗೆ ಎರಡನೇ ದರ್ಜೆಯ ವಾರಸುದಾರರು ಎನ್ನುವ ಲೆಕ್ಕದಲ್ಲಿ ಆಸ್ತಿಗಳು ಬರುತ್ತವೆ. ನೀವು ವಿಚ್ಛೇದನ ಮಾಡಿದ ಮಾತ್ರಕ್ಕೆ ತಾಯಿ-ಮಗನ ಸಂಬಂಧ ಕುಂಠಿತವಾಗುವುದಿಲ್ಲ. ಕಾನೂನಿನ ಪ್ರಕಾರ ನಿಮಗೆ ಹಕ್ಕು ಬರುವುದಿಲ್ಲ. ಬೇಕಿದ್ದರೆ ರಾಜಿ ಮಾಡಿಕೊಂಡು ನೀವು ಹೂಡಿದ ಹಣವನ್ನಾದರೂ ವಾಪಸ್ ಪಡೆಯಲು ಸಾಧ್ಯವೇ ಎಂದು ಪ್ರಯತ್ನಿಸಿ ನೋಡಿ.

ನಮ್ಮ ಅಕ್ಕ ಭಾವ ಇಬ್ಬರೂ ಅಪಘಾತದಲ್ಲಿ ತೀರಿಕೊಂಡಿದ್ದಾರೆ. ಅವರಿಗೆ ಒಬ್ಬಳೇ ಮಗಳು. ಅವಳ ವಯಸ್ಸು ಹದಿನಾಲ್ಕು. ನಮ್ಮ ಭಾವನಿಗೆ ತುಂಬಾ ಆಸ್ತಿಗಳು ಇದ್ದವು. ಬಾಡಿಗೆ ಬರುತ್ತಿತ್ತು. ಬಾಡಿಗೆದಾರರು ನಮಗೆ ಬಾಡಿಗೆ ಕೊಡುತ್ತಿಲ್ಲ. ಈಗ ಅವೆಲ್ಲಾ ನಮ್ಮ ಅಕ್ಕನ ಮಗಳಿಗೆ ಬರಬೇಕೆಂದರೆ ನಾವು ಏನು ಮಾಡಬೇಕು?

ನೀವು ನ್ಯಾಯಾಲಯದಲ್ಲಿ ಅಪ್ರಾಪ್ತ ವಯಸ್ಸಿನ ಮಗುವಿನ ಗಾರ್ಡಿಯನ್ ಆಗಿ ನಿಮ್ಮನ್ನು ನೇಮಿಸುವಂತೆ ಪ್ರಕರಣ ದಾಖಲಿಸಬೇಕು. ಗಾರ್ಡಿಯನ್ ಆಫ್ ಪ್ರಾಪರ್ಟಿ ಮತ್ತು ಗಾರ್ಡಿಯನ್ ಆಫ್ ಪರ್ಸನ್ ಅಂದರೆ ಅಪ್ರಾಪ್ತ ವಯಸ್ಕ ಮಗುವಿನ ರಕ್ಷಣೆ ಮತ್ತು ಆಸ್ತಿ ಎರಡಕ್ಕೂ ಸಂಬಂಧಿಸಿದಂತೆ, ಗಾರ್ಡಿಯನ್ ಆಗಿ ನೇಮಿಸಬೇಕೆಂದು ಅರ್ಜಿ ಸಲ್ಲಿಸಿ. ನ್ಯಾಯಾಲಯವು ವಿಚಾರಣೆ ಮಾಡಿ, ಮಗುವಿನ ಹಿತದೃಷ್ಟಿಯಿಂದ, ನಿಮ್ಮನ್ನು ಗಾರ್ಡಿಯನ್ ಆಗಿ ಮಾಡಬಹುದು ಎನ್ನುವ ತೀರ್ವನಕ್ಕೆ ಬಂದರೆ, ಆಗ ನೀವು ಮಗುವಿನ ರಕ್ಷಣೆಯನ್ನೂ ಮಾಡಬಹುದು. ಹಾಗೆಯೇ ಮಗುವಿನ ಆಸ್ತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಮಗುವಿನ ಹಿತದೃಷ್ಟಿಯಿಂದ ಮಾಡಬೇಕಾದ ಎಲ್ಲ ವ್ಯವಹಾರವನ್ನೂ ಮಾಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net