

ಬೆಂಗಳೂರು: ಈ ಕರೊನಾ ಎಂಬ ಮಾರಕ ಸೋಂಕು ಅಡ್ಡಗಾಲು ಹಾಕದೆ ಇದ್ದರೆ ಇಷ್ಟೊತ್ತಿಗೆ ನಟ ಶಿವರಾಜಕುಮಾರ್ ತಮ್ಮ ಆಪ್ತರೊಡನೆ ಶಬರಿಮಲೆ ಪ್ರವಾಸ ಕೈಗೊಂಡು, ಅಯ್ಯಪ್ಪನ ದರ್ಶನ ಮಾಡಬೇಕಿತ್ತು.
ಆದರೆ ಕರೊನಾ ಭಯದಿಂದ ಈ ವರ್ಷ ಶಬರಿಮಲೆ ಪ್ರವಾಸವನ್ನು ಕೈಬಿಟ್ಟಿರುವ ಶಿವರಾಜಕುಮಾರ್, ಬೆಂಗಳೂರಿನಲ್ಲಿಯೇ ಮಾಲೆ ತೆಗೆದಿದ್ದಾರೆ.
ಶಿವರಾಜ್ಕುಮಾರ್ ಅವರು ಪ್ರತಿವರ್ಷವೂ ಅಯ್ಯಪ್ಪನ ಮಾಲೆ ಧರಿಸುತ್ತಾರೆ. ನಂತರ ತಮ್ಮ ಆಪ್ತರೊಂದಿಗೆ ಶಬರಿಮಲೆಗೆ ತೆರಳಿ ಮಾಲೆ ತೆಗೆಯುತ್ತಿದ್ದರು. ಈ ಬಾರಿಯೂ ಅವರು ಮಾಲೆ ಧರಿಸಿ, ಮಾ.14ರಿಂದ 21ರವರೆಗೆ ಶಬರಿಮಲೆ ಯಾತ್ರೆ ಕೈಗೊಂಡಿದ್ದರು. ಆದರೆ ಕರೊನಾ ವೈರಸ್ ಹರಡುವ ಆತಂಕದಿಂದ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ನಿರ್ಬಂಧ ಹೇರಲಾಗಿದೆ. ಹಾಗೇ ದೇಗುಲದಲ್ಲಿ ತುಪ್ಪದ ತೆಂಗಿನಕಾಯಿ ಒಡೆಯುವುದಕ್ಕೂ ಅವಕಾಶ ಇಲ್ಲ. ಹಾಗಾಗಿ ಶಿವರಾಜಕುಮಾರ್ ಯಾತ್ರೆಯನ್ನು ರದ್ದುಗೊಳಿಸಿದ್ದಾರೆ.
ಭಾನುವಾರ ತಮ್ಮ ಮನೆಯಲ್ಲಿ ಅಯ್ಯಪ್ಪ ಸ್ವಾಮಿಯ ಪೂಜೆಯನ್ನು ಇಟ್ಟುಕೊಂಡಿದ್ದ ಶಿವರಾಜಕುಮಾರ್, ಈ ಪೂಜೆಗೆ ತಮ್ಮ ಸಂಬಂಧಿಕರು ಮತ್ತು ಹಿತೈಷಿಗಳ ಜತೆಗೆ ಉದ್ಯಮದ ಗಣ್ಯರನ್ನು ಸಹ ಆಹ್ವಾನಿಸಿದ್ದರು. ಪೂಜೆಗೆ ಹಿರಿಯ ನಟ ಶಿವರಾಮ್ ನೇತೃತ್ವ ವಹಿಸಿದ್ದರು. ರಾಘವೇಂದ್ರ ರಾಜಕುಮಾರ್, ನಟ-ನಿರ್ದೇಶಕ ರಘುರಾಮ್, ಮಧು ಬಂಗಾರಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು. ಆ ನಂತರ ಜಾಲಹಳ್ಳಿಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶಿವರಾಜಕುಮಾರ್ ಮಾಲೆ ತೆಗೆದರು.