

ವಿಜಯಪುರ: ಹೆರಿಗೆ ಬಳಿಕ ನಿರ್ಲಕ್ಷ್ಯ ವಹಿಸಿದ್ದಲ್ಲದೇ ಬಾಣಂತಿ ಸಾವಿಗೆ ಕಾರಣರಾದ ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಗ್ರಾಹಕರ ಆಯೋಗ 15 ಲಕ್ಷ ರೂ. ದಂಡ ವಿಧಿಸಿದೆ. ತಿಕೋಟಾ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂದಿನ ಮೆಡಿಕಲ್ ಆಫೀಸರ್ ಡಾ. ನಂದಿನಿ, ರೇಣುಕಾ ಬನ್ನೂರ, ಜ್ಯೋತಿ ಹೊಸಮನಿ, ಸುನಿತಾ ಭಾವಿಮನಿ ಇವರಿಗೆ ದಂಡ ವಿಧಿಸಲಾಗಿದೆ. ಈ ಪೈಕಿ ಡಾ.ನಂದಿನಿ ಅವರೇ ಬರೋಬ್ಬರಿ 11 ಲಕ್ಷ ರೂ. ದಂಡ ಕಟ್ಟಬೇಕಿದೆ.
ಏನಿದು ಪ್ರಕರಣ?: ತುಂಬು ಗರ್ಭಿಣಿಯಾಗಿದ್ದ ಜಯಶ್ರೀ 2018ರ ಜೂ.3ರಂದು ತಿಕೋಟಾ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆರಿಗೆಗಾಗಿ ದಾಖಲಾಗಿದ್ದರು. ಹೆರಿಗೆ ನೋವಿನಿಂದ ಬಳಲುತ್ತಿದ್ದಾಗ ವೈದ್ಯರು ಇಲ್ಲದ ಕಾರಣ ಶುಶ್ರೂಷಕಿ ರೇಣುಕಾ ಬನ್ನೂರ ತಾವೇ ದಾಖಲು ಮಾಡಿಕೊಂಡಿದ್ದರು. ಸಾಕಷ್ಟು ಸಮಯ ಕಳೆದರೂ ವೈದ್ಯರು ಬಾರದ ಹಿನ್ನೆಲೆ ಸಿಬ್ಬಂದಿ ಜ್ಯೋತಿ ಹೊಸಮನಿ ಹಾಗೂ ಸುನಿತಾ ಭಾವಿಮನಿ ಅವರೇ ಹೆರಿಗೆ ಮಾಡಿದ್ದರು. ಹೆಣ್ಣು ಮಗುವಿಗೆ ಜಯಶ್ರೀ ಜನ್ಮ ನೀಡಿದ್ದರು. ಆದರೆ, ಹೆರಿಗೆ ಬಳಿಕ ಜಯಶ್ರೀಗೆ ಗರ್ಭಕೋಶ ಹೊರಬಂದಿದ್ದು, ಬೇರೊಂದು ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಬಿಎಲ್‌ಡಿಇ ಆಸ್ಪತ್ರೆಗೆ ದಾಖಲಿಸಲಾಗಿ ಜಯಶ್ರೀ ಚಿಕಿತ್ಸೆ ಫಲಿಸದೆ 2018 ಜೂ.6ರಂದು ಮೃತಪಟ್ಟರು. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದರು.
ಈ ಪ್ರಕರಣ ಸಂಬಂಧ 2019ರ ನ.20ರಂದು ಅಥಣಿ ತಾಲೂಕಿನ ಹಣಮಾಪುರ ಗ್ರಾಮದ ಸುರೇಶ ಮಜ್ಜಗಿ ಮತ್ತು ಇವರ ಮಗಳು ಸುಮಿತಾ ಎಂಬುವರು ವಿಜಯಪುರ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಗ್ರಾಹಕರ ಆಯೋಗ, ನಾಲ್ವರು ಆರೋಪಿತರಿಗೆ ನೋಟಿಸ್ ಜಾರಿಗೊಳಿಸಿತ್ತು. ಈ ಬಗ್ಗೆ ಸಾಕಷ್ಟು ಅವಕಾಶ ನೀಡಿದರೂ ತಕರಾರು ಮತ್ತು ದಾಖಲೆಗಳನ್ನು ನೀಡದ ಹಿನ್ನೆಲೆ ಒಟ್ಟು 15 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದರಲ್ಲಿ ಡಾ.ನಂದಿನಿ ಒಬ್ಬರೇ 11 ಲಕ್ಷ ರೂ. ದಂಡ ಪಾವತಿಸಬೇಕು. ಇನ್ನುಳಿದ ಮೂವರು 4 ಲಕ್ಷ ರೂ. ದಂಡ ಪಾವತಿಸಬೇಕು. ಅಲ್ಲದೆ ದೂರು ದಾಖಲಾದ ದಿನದಿಂದ ಶೇ.9 ಬಡ್ಡಿ ಪಾವತಿಸಬೇಕು. ತಪ್ಪಿದ್ದಲ್ಲಿ ಶೇ.12 ಬಡ್ಡಿಯೊಂದಿಗೆ ಹಣ ಪಾವತಿಸಲು ತೀರ್ಪಿನಲ್ಲಿ ತಿಳಿಸಲಾಗಿದೆ.
ಮುಂದುವರಿದು ರೇಣುಕಾ ಬನ್ನೂರ, ಜ್ಯೋತಿ ಹೊಸಮನಿ, ಸುನಿತಾ ಭಾವಿಮನಿ ಒಟ್ಟಿಗೆ ಇಲ್ಲವೇ ಪ್ರತ್ಯೇಕ ಮಾನಸಿಕ ವ್ಯಥೆಗೆ 25 ಸಾವಿರ ರೂ. ಹಾಗೂ ದೂರಿನ ಖರ್ಚು ಎಂದು 10 ಸಾವಿರ ರೂ. ಪಾವತಿಸಲು ಆಯೋಗದ ಅಧ್ಯಕ್ಷ ಅಂಬಾದಾಸ. ಕುಲಕರ್ಣಿ, ಸದಸ್ಯೆ ವಿ.ಬಿ.ಮುತಾಲಿಕ ದೇಸಾಯಿ ಹಾಗೂ ಕಮಲಕಿಶೋರ್ ಆರ್. ಜೋಶಿ ಇವರನ್ನು ಒಳಗೊಂಡ ಆಯೋಗ ಆದೇಶ ನೀಡಿದೆ.