ಶವಸಂಸ್ಕಾರದಲ್ಲಿ ಶವವೇ ಮಾಡಿತು ವೆಲ್​ಕಮ್​! ನಾವು ಶವಸಂಸ್ಕಾರ ಮಾಡೋದೆ ಇಲ್ಲ ಎಂದ ಚರ್ಚ್​

dead
Published on

ಡಿಯಾಗೋ ಮಾರ್ಟಿನ್​: ಮದುವೆ ಮನೆಗಳಿಗೆ ಹೋದಾಗ ಚಂದದ ಯುವತಿಯರು ಹೂ ಕೊಟ್ಟು, ಸುಗಂದ ದ್ರವ್ಯ ಸಿಂಪಡಿಸಿ ನಿಮ್ಮನ್ನ ಸ್ವಾಗತಿಸಿಕೊಳ್ಳುತ್ತಾರೆ. ಅದೇ ಶವಸಂಸ್ಕಾರಕ್ಕೆ ಹೋದಾಗ? ಶವಸಂಸ್ಕಾರಕ್ಕೆ ಹೋದಾಗ ಶವವೇ ನಿಮ್ಮನ್ನು ವೆಲ್​ಕಮ್​ ಮಾಡಿದರೆ ಹೇಗಿರುತ್ತದೆ?

ಆಶ್ಚರ್ಯ ಆದರೂ ಇದು ಸತ್ಯವೇ. ಸ್ಪೇನ್​ನ ಟ್ರಿನಿಡಾಡ್‌ನ ಡಿಯಾಗೋ ಮಾರ್ಟಿನ್ ನಗರದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಆತನಿಗೆ ಇನ್ನೂ 29 ವರ್ಷ. ತಂದೆ ಮಗ ಇಬ್ಬರು ಮನೆಯಲ್ಲಿದ್ದ ಸಮಯ ನೋಡಿ ದುಷ್ಕರ್ಮಿಗಳು ಇಬ್ಬರಿಗೂ ಗುಂಡಿಕ್ಕಿ ಕೊಲೆ ಮಾಡಿಬಿಟ್ಟಿದ್ದರು. ಅವರಿಬ್ಬರ ಅಂತ್ಯಸಂಸ್ಕಾರವನ್ನು ನವೆಂಬರ್​ನ ಕೊನೆಯಲ್ಲಿ ಅಲ್ಲಿನ ಚರ್ಚ್​ ಒಂದರಲ್ಲಿ ಇಟ್ಟುಕೊಳ್ಳಲಾಗಿತ್ತು. ಆದರೆ ಅಂತ್ಯಸಂಸ್ಕಾರಕ್ಕೆ ಯುವಕನ ಶವ ಹೋದ ರೀತಿಯನ್ನು ಕಂಡು ಬೆಚ್ಚಿದ ಚರ್ಚ್ ಶವ ಸಂಸ್ಕಾರ ಮಾಡೋದಕ್ಕೇ ಒಪ್ಪಿಗೆ ಕೊಟ್ಟಿಲ್ಲ.

ಕಾರಿನಲ್ಲಿ ಶವದ ಮೆರವಣಿಗೆ
ಕಾರಿನಲ್ಲಿ ಶವದ ಮೆರವಣಿಗೆ

ಸಾಮಾನ್ಯವಾಗಿ ಶವಗಳನ್ನು ಶವ ಪೆಟ್ಟಿಗೆಯಲ್ಲಿಟ್ಟುಕೊಂಡು ಚರ್ಚ್​ಗೆ ತೆಗೆದುಕೊಂಡು ಹೋಗಲಾಗುತ್ತದೆ. ಆದರೆ ಈ ಯುವಕನ ಶವವನ್ನು ಆ ರೀತಿ ತೆಗೆದುಕೊಂಡು ಹೋಗಿಲ್ಲ. ಬಿಳಿ ಬಣ್ಣದ ಶರ್ಟ್​, ಪ್ಯಾಂಟ್​, ಬೂಟು, ಪಿಂಕ್​ ಬಣ್ಣದ ಬ್ಲೇಸರ್​ ಮತ್ತು ಟೈ ಅನ್ನು ಶವಕ್ಕೆ ತೊಡಿಸಿ ಅದನ್ನು ಖುರ್ಚಿಯೊಂದರ ಮೇಲೆ ಕೂರಿಸಲಾಗಿದೆ. ಆ ಖುರ್ಚಿಯನ್ನು ಓಪನ್​ ಇದ್ದ ಕಾರೊಂದರಲ್ಲಿ ಕೂರಿಸಿಕೊಂಡು ನಗರ ಪೂರ್ತಿ ಮೆರವಣಿಗೆ ಮಾಡಿಕೊಂಡು ಚರ್ಚ್​ಗೆ ತರಲಾಗಿದೆ. ಆದರೆ ಶವಪೆಟ್ಟಿಗೆಯಲ್ಲಿ ಶವ ಇಲ್ಲದ ಕಾರಣ ಯುವಕನ ಶವವನ್ನು ಚರ್ಚ್​ ಒಳಗೆ ಬಿಟ್ಟುಕೊಂಡಿಲ್ಲ. ಕೇವಲ ಆತನ ತಂದೆಯ ಶವ ಪೆಟ್ಟಿಗೆಯನ್ನು ಒಳಗೆ ಸೇರಿಸಿ ಅಂತಿಮ ವಿಧಿ ವಿಧಾನ ಮಾಡಲಾಗಿದೆ.

ಖುರ್ಚಿಯಲ್ಲೇ ಚರ್ಚ್​ ಸೇರಿದ್ದ ಯುವಕನ ಶವವನ್ನು ಚರ್ಚ್​ನ ಮುಂಭಾಗದಲ್ಲಿ ಇರಿಸಲಾಗಿದೆ. ಅಂತ್ಯಸಂಸ್ಕಾರಕ್ಕೆ ಬರುತ್ತಿದ್ದ ಅನೇಕರಿಗೆ ಅದು ಶವ ಎನ್ನುವುದೇ ಗೊತ್ತಾಗಿಲ್ಲವಂತೆ. ಹೊರಗೆ ಕುಳಿತಿರುವ ವ್ಯಕ್ತಿ ಮಾಸ್ಕ್​ ಹಾಕಿಲ್ಲ ಎಂದು ಅನೇಕರು ದೂರನ್ನೂ ಕೊಟ್ಟಿದ್ದಾರಂತೆ. ವಿಶೇಷವೆಂದರೆ ಅಂತಿಮ ನಮನದ ಫೋಟೋ ಫ್ಲೆಕ್ಸ್​ ಇದ್ದ ಪಕ್ಕದಲ್ಲೇ ಶವವನ್ನು ಕೂರಿಸಲಾಗಿದೆ. ಆದರೂ ಅನೇಕರಿಗೆ ಅದು ಶವ ಎನ್ನುವುದೇ ಗೊತ್ತಾಗಿಲ್ಲ. ತಂದೆಯ ಶವದ ಅಂತಿಮ ವಿಧಿ ವಿಧಾನದ ನಂತರ ಇಬ್ಬರ ಶವವನ್ನು ಶವಾಗಾರದಲ್ಲಿ ದಹಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net