

ಬೆಂಗಳೂರು: ಪದವಿ ಮತ್ತು ಡಿಪ್ಲೊಮಾ ಸೆಮಿಸ್ಟರ್ಗಳ ಬಾಕಿ ಉಳಿದಿರುವ ಪರೀಕ್ಷೆಗಳನ್ನು ಕ್ರಮವಾಗಿ ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳೊಳಗಾಗಿ ಮುಗಿಸಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಸೂಚಿಸಿದ್ದಾರೆ.
ಪರೀಕ್ಷೆಗಳು ಹಾಗೂ ಕಾಲೇಜುಗಳನ್ನು ತೆರೆಯುವ ಬಗ್ಗೆ ಉನ್ನತ ಅಧಿಕಾರಿಗಳು ಹಾಗೂ ಉನ್ನತ ಶಿಕ್ಷಣ ಮಂಡಳಿ ಸದಸ್ಯರ ಜತೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ, ಡಿಸಿಎಂ, ಬೆಸ ಸೆಮಿಸ್ಟರ್ಗಳ (1, 3, 5) ಡಿಪ್ಲೊಮಾ ಪ್ರಾಯೋಗಿಕ ಪರೀಕ್ಷೆಗಳು ಜುಲೈ 26ರಿಂದ 28 ಮತ್ತು ಇವೇ ಸೆಮಿಸ್ಟರ್ಗಳ ಉಳಿದ ವಿಷಯಗಳ ಥಿಯರಿ ಪರೀಕ್ಷೆಗಳು ಮತ್ತಿತರೆ ಸೆಮಿಸ್ಟರ್ಗಳ ಪರೀಕ್ಷೆಗಳು ಅ.2ರಿಂದ 21ರವರೆಗೆ ನಡೆಸಲು ಸೂಚಿಸಲಾಗಿದೆ ಎಂದರು.
ಇನ್ನು ಸಮ ಸೆಮಿಸ್ಟರ್ಗಳಾದ 2, 4 6ರ ಡಿಪ್ಲೊಮಾ ಪ್ರಾಯೋಗಿಕ ಪರೀಕ್ಷೆಗಳನ್ನು ನವೆಂಬರ್ 2ರಿಂದ 12ರವರೆಗೆ ಹಾಗೂ ಇವೇ ಸೆಮಿಸ್ಟರ್ಗಳ ಥಿಯರಿ ಪರೀಕ್ಷೆಗಳನ್ನು ನ.17ರಿಂದ ಡಿಸೆಂಬರ್ 6ರವರೆಗೆ ನಡೆಸಲಾಗುವುದು. ಎಲ್ಲ ಪರೀಕ್ಷೆಗಳಲ್ಲೂ ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯ ಎಂದು ಅಶ್ವತ್ಥನಾರಾಯಣ್ ಹೇಳಿದರು.
ಬಹುತೇಕ ಎಲ್ಲ ವಿವಿಗಳು ಪರೀಕ್ಷೆಗಳನ್ನು ಮುಗಿಸಿದ್ದು, ಕೋವಿಡ್ ಲಾಕ್ಡೌನ್ ಕಾರಣಕ್ಕೆ ಕರ್ನಾಟಕ ವಿವಿ, ಕಲಬುರಗಿ ವಿವಿ, ಬೆಂಗಳೂರು ವಿವಿ ಪರೀಕ್ಷೆ ನಡೆಸಲು ಸಾಧ್ಯವಾಗಿಲ್ಲ. ಅವುಗಳನ್ನು ಅಕ್ಟೋಬರ್ ತಿಂಗಳೊಳಗೆ ನಡೆಸಲಾಗುವುದು ಎಂದರು.