ಅಪ್ಪ ಸತ್ತ 4 ದಿನಕ್ಕೆ ಅಮ್ಮನೂ ಕೋವಿಡ್​ಗೆ ಬಲಿ! ಅಂತ್ಯಸಂಸ್ಕಾರಕ್ಕೆ ಹಣ ಇಲ್ಲದೆ ಪುಟ್ಟ ಮಗಳೇ ಗುಂಡಿ ಅಗೆದು ಕಾರ್ಯ ಮುಗಿಸಿದ್ಲು

corona 1
Published on

ಬಿಹಾರ: ಮಹಾಮಾರಿ ಕರೊನಾ ಸೋಂಕಿನ ಭೀತಿಯಲ್ಲಿ ಮಾನವೀಯತೆ ಮರೆಯಾಗುತ್ತಿದೆ ಎಂಬುದಕ್ಕೆ ಇದಕ್ಕಿಂತ ಮತ್ತೊಂದು ನಿದರ್ಶನ ಬೇಕಿಲ್ಲ. ಕರೊನಾ ಸೋಂಕಿಗೆ ತುತ್ತಾಗಿದ್ದ ತಂದೆ-ತಾಯಿಯನ್ನ ಬದುಕಿಸಿಕೊಳ್ಳಲು ಇವರ ಮೂವರು ಪುಟ್ಟ ಮಕ್ಕಳು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ವಿಧಿಯ ಮುಂದೆ ಯಾರು ಏನೇ ಮಾಡಿದರೂ ಎಲ್ಲವೂ ವ್ಯರ್ಥ ಎಂಬಂತೆ ನಾಲ್ಕು ದಿನಗಳ ಅಂತರದಲ್ಲಿ ದಂಪತಿ ಇಬ್ಬರೂ ಸತ್ತೇ ಹೋದರು. ಅಂತ್ಯಕ್ರಿಯೆಗೆ ಗುಂಡಿ ತಗೆಸಲು ಹಣ ಇಲ್ಲದ ಪರದಾಡಿದ ಮಕ್ಕಳು ಕೊನೆಗೆ ತಾವೇ ಸಮಾಧಿ ಅಗೆದು ತಾಯಿಯ ಅಂತ್ಯಸಂಸ್ಕಾರ ಮಾಡಿದ್ದಾರೆ.

ಇಂತಹ ಹೃದಯವಿದ್ರಾವಕ ಘಟನೆ ಬಿಹಾರ ರಾಜ್ಯದ ಅರೇರಿಯಾ ಜಿಲ್ಲೆಯಲ್ಲಿ ನಿನ್ನೆ(ಶುಕ್ರವಾರ) ಸಂಭವಿಸಿದೆ. ರಾಣಿಗಂಜ್​ನ ಬಿಶಾನ್ಪುರ್​ ಪಂಚಾಯಿತಿ ವ್ಯಾಪಿಯ 7ನೇ ವಾರ್ಡ್​ ನಿವಾಸಿಗಳಾದ ಬೀರೇಂದ್ರ ಮೆಹ್ತಾ(40) ಹಾಗೂ ಪ್ರಿಯಾಂಕಾ ದೇವಿ(32) ದಂಪತಿಗೆ ಏ.28ರಂದು ಕರೊನಾ ಪಾಸಿಟಿವ್​ ದೃಢಪಟ್ಟಿತ್ತು. ಇವರ ಪ್ರಾಥಮಿಕ ಸಂಪರ್ಕದಲ್ಲಿ ಮೂವರು ಮಕ್ಕಳಿದ್ದರು. ದಂಪತಿಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೇ 3 ರಂದು ಬೀರೇಂದ್ರ ಮೆಹ್ತಾ ಮೃತಪಟ್ಟಿದ್ದರು. ಗಂಡನ ಸಾವಿನ ನಂತರ ಪ್ರಿಯಾಂಕಾ ದೇವಿ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಇದನ್ನೂ ಓದಿರಿ ಇನ್ಮುಂದೆ ಕರೊನಾ ಸೋಂಕಿತರ ಮನೆ ಮುಂದೆ ಹಾರಾಡಲಿದೆ ಬಿಳಿ ಬಾವುಟ, ತೆಗೆದವರ ವಿರುದ್ಧ ಎಫ್​ಐಆರ್!

ಅತ್ತ ತಾಯಿ ಪ್ರಿಯಾಂಕಾರ ಆರೋಗ್ಯ ಸ್ಥಿತಿ ಗಂಭೀರ ಆಗುತ್ತಿದ್ದಂತೆ ಇತ್ತ ಹಣ ಹೊಂದಿಸಲು ಮಕ್ಕಳಿಗೆ ಕಷ್ಟವಾಗುತ್ತಲೇ ಇತ್ತು. ಚಿಕಿತ್ಸೆಗೆ ಹಣ ಭರಿಸಲಾಗದೆ ಕುಟುಂಬಸ್ಥರು ಮೇ 5ರ ರಾತ್ರಿ ಪ್ರಿಯಾಂಕಾ ದೇವಿಯನ್ನ ಮನೆಗೆ ಕರೆತಂದಿತ್ತು. ಮರುದಿನ ರಾತ್ರಿ ಅಂದರೆ ಗುರುವಾರ ರಾತ್ರಿ ಆರೋಗ್ಯ ಸ್ಥಿತಿ ತೀವ್ರ ಗಂಭೀರಗೊಂಡಿದ್ದು, ಮತ್ತೆ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿರುವಾಗಲೇ ಅಂದರೆ ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದರು.

ಪ್ರಿಯಾಂಕಾ ದೇವಿಯ ಮೂವರು ಮಕ್ಕಳು
ಪ್ರಿಯಾಂಕಾ ದೇವಿಯ ಮೂವರು ಮಕ್ಕಳು

ತಾಯಿ ಶವವನ್ನು ಗ್ರಾಮಕ್ಕೆ ತಂದರೂ ಅಲ್ಲಿನ ಯಾರೊಬ್ಬರೂ ಈ ಮಕ್ಕಳ ಸಹಾಯಕ್ಕೆ ಬರಲಿಲ್ಲ. ಕರೊನಾ ಸೋಂಕಿನ ಭೀತಿಯಲ್ಲಿ ಅಮಾನವೀಯವಾಗಿ ವರ್ತಿಸಿದ್ದಾರೆ. ಇತ್ತ ತಾಯಿಯ ಅಂತ್ಯಸಂಸ್ಕಾರಕ್ಕೆ ಗುಂಡಿ ತೋಡಿಸಲು ಮೃತರ ಮಕ್ಕಳ ಬಳಿ ಹಣವೂ ಇರಲಿಲ್ಲ. ಕೊನೆಗೆ ಮೃತರ ಹಿರಿಯ ಪುತ್ರಿ ಸೋನಿ ಕುಮಾರಿ ಪಿಪಿಇ ಕಿಟ್ ಧರಿಸಿ ಸ್ವತಃ ಗುಂಡಿ ತೋಡಿದ್ದಾಳೆ. ಬಳಿಕ ಮೂರು ಮಕ್ಕಳು ಜಂಟಿಯಾಗಿ ತಾಯಿಯ ಶವವನ್ನು ಸಮಾಧಿಯಲ್ಲಿ ಮುಚ್ಚಿ ಅಂತಿಮ ವಿಧಿವಿಧಾನ ನೆರವೇರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net