

ಬೆಂಗಳೂರು: ಕರ್ನಾಟಕಕ್ಕೆ ಆಕ್ಸಿಜನ್ ಪೂರೈಕೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡಿದೆ ಎಂದು ನಿನ್ನೆ ಗಂಭೀರ ಆರೋಪ ಮಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ಇಂದು ರಾಜ್ಯದ ಬಿಜೆಪಿ ನಾಯಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ನಾವೇನ್ ನೋಟ್ ಪ್ರಿಂಟ್ ಮಾಡ್ತೀವಾ? ಜಡ್ಜ್‌ಗಳು ಸರ್ವಜ್ಞರಲ್ಲ, ಕರೊನಾ ವೈರಸ್‌ಗಾಗಿ ಚೀನಾವನ್ನು ದೂಷಿಸಬೇಕು. ನೇಣು ಹಾಕಿಕೊಳ್ಳಲು ಆಗುತ್ತಾ?. ಕೋವಿಡ್ ಪ್ಯಾಕೇಜ್ ಕೊಡಲು ಆಗಲ್ಲ, ದೇಶದ ದುಸ್ಥಿತಿಗೆ ವಿರೋಧ ಪಕ್ಷಗಳು ಕಾರಣ... ಇವುಗಳು ಧರೆಗೆ ಸ್ವರ್ಗ ಇಳಿಸುವ ಭರವಸೆಯೊಂದಿಗೆ ಅಧಿಕಾರ ಹಿಡಿದ ಬಿಜೆಪಿಯ ಅಸಮರ್ಥರ ಕೈಲಾಗದ ಮಾತು ಎಂದು ಟ್ವೀಟ್ ಮೂಲಕ ರಾಜ್ಯ ಸರ್ಕಾರವನ್ನ ಎಚ್ಡಿಕೆ ಕಟುವಾಗಿ ಟೀಕಿಸಿದ್ದಾರೆ.
ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ, ದೆಹಲಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುತ್ತಿದೆ. ಕೋವಿಡ್ ಪರಿಸ್ಥಿತಿ ನಿಭಾಯಿಸುವ ವೇಳೆ ಜನರಿಗೆ ಆದ ತೊಂದರೆಗೆ ಈ ರಾಜ್ಯಗಳಲ್ಲಿ ಪರಿಹಾರಗಳನ್ನೂ ನೀಡಲಾಗಿದೆ. ಜನರಿಗೆ ಉಚಿತ ಆಹಾರ, ಆರೋಗ್ಯ ಸೇವೆ ನೀಡಲಾಗಿದೆ. ಜನರೆಡೆಗೆ ಪ್ರಾದೇಶಿಕ ಪಕ್ಷಗಳಿಗೆ ಇರುವ ಬದ್ಧತೆಗೆ ಇದು ಸಾಕ್ಷಿ ಎಂದು ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ನಾಯಕರು ಕೈಲಾಗದ ಮಾತನ್ನು ಬಿಡಬೇಕು. ಜನರನ್ನು ಮತ್ತಷ್ಟು ನಿರಾಶರನ್ನಾಗಿಸಬೇಡಿ. ಜನರ ಆರೋಗ್ಯ ಮತ್ತು ಜೀವ ಮುಖ್ಯ. ಅದಕ್ಕಾಗಿ ಸಕಲವನ್ನೂ ಮಾಡಿ. ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಸಂಸದರು, ಸಚಿವರು ಶ್ರೀಕೃಷ್ಣನ ಮಾತುಗಳನ್ನು ನೆನಪಿಸಿಕೊಳ್ಳಿ. 'ನಿಮ್ಮ ಕರ್ತ್ಯವ್ಯ ನೀವು ಮಾಡಿ.' ಈ ಮೂಲಕ ರಾಜ್ಯಕ್ಕೆ ಬರಬೇಕಾದ್ದನ್ನು ತನ್ನಿ ಎಂದು ಕಿವಿಹಿಂಡಿದ್ದಾರೆ.