

ಬೆಂಗಳೂರು: ಪ್ರಚೋದನೆ, ಪ್ರಲೋಭನೆ, ಆಮಿಷ ಅಥವಾ ಬಲವಂತದ ಮತಾಂತರ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ಸು, ಕಾನೂನು ರೀತ್ಯಾ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ಸಮೀಪದ ಬ್ಯಾಡರಹಳ್ಳಿ ಮತ್ತು ಯಾದಗಿರಿ ಪ್ರಕರಣಗಳತ್ತ ಗಮನಸೆಳೆದಾಗ ಬಲವಂತದ ಮತಾಂತರ ಸಹಿಸುವುದಿಲ್ಲ. ಎಲ್ಲ ಜಿಲ್ಲಾ ಆಡಳಿತಗಳಿಗೆ ಈ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಬಲವಂತದ ಮತಾಂತರ ತಡೆಗಟ್ಟುವ ಜತೆಗೆ ಅಂತಹ ಪ್ರಕರಣಗಳು ಕಂಡು ಬಂದರೆ ಕಾನೂನು ಪ್ರಕಾರ ಕ್ರಮ ಜರುಗಿಸಲು ತಿಳಿಸಲಾಗಿದೆ ಎಂದು ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ನಾರಾಯಣಸ್ವಾಮಿ ಎಂಬುವವರ ಮನೆಯಲ್ಲಿ 80ಕ್ಕೂ ಅಧಿಕ ಮಕ್ಕಳನ್ನು ಸೇರಿಸಿ ಕ್ರೈಸ್ತ ಪ್ರಾರ್ಥನೆ ಮಾಡಿಸಲಾಗುತ್ತಿದೆ ಎಂದು ಆರೋಪ ಕೇಳಿ ಬಂದಿದೆ. ಈ ಬಗ್ಗೆ ಕೇಸ್ ದಾಖಲಾಗಿದ್ದು, ಮಕ್ಕಳಿಂದ ಪ್ರಾರ್ಥನೆ ಮಾಡಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ವಿಡಿಯೋ ಕೂಡ ವೈರಲ್ ಆಗಿದೆ.