ಕನ್ನಡತನದ ಘಮ ಪಸರಿಸಲಿ: ಕರ್ನಾಟಕದ ವರ್ಚಸ್ಸು ವೃದ್ಧಿಗೆ ಸಾಮೂಹಿಕ ಪ್ರಯತ್ನ ಅಗತ್ಯ

Kannada Editorial
Published on

ಕನ್ನಡ ರಾಜ್ಯೋತ್ಸವದ ಸಂಭ್ರಮ ಮತ್ತೆ ಅಡಿಯಿಟ್ಟಿದ್ದು, ಪುಳಕದ ಅನುಭವ ಮೂಡಿಸಿದೆ. ದಕ್ಷಿಣ ಭಾರತದ ವಿವಿಧ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವಾಗಿ ಘೋಷಣೆ ಮಾಡಲಾದ ಈ ದಿನ, ಸಂಭ್ರಮಾಚರಣೆಯ ಜತೆಜತೆಗೆ ಆತ್ಮಾವಲೋಕನದ ದಿನವೂ ಆಗಬೇಕಾದ್ದು ಇಂದಿನ ಅನಿವಾರ್ಯತೆ. ಏಕೀಕರಣದ ಆಶಯಗಳು ಈಡೇರಿವೆಯೇ, ಅಭಿವೃದ್ಧಿಯ ಕನಸುಗಳು ನನಸಾಗಿವೆಯೇ ಎಂಬ ಚಿಂತನೆಗೆ ತೊಡಗಿಕೊಳ್ಳಬೇಕಿದೆ. ಕಾಲಘಟ್ಟ ಬದಲಾದಂತೆ ಹೊಸ ಸ್ವರೂಪದ ಸಮಸ್ಯೆಗಳ ಪರಿಹಾರದ ನಿಟ್ಟಿನಲ್ಲೂ ಗಮನ ಹರಿಸಬೇಕಿದೆ. ಕರ್ನಾಟಕ ವಿವಿಧ ರಂಗಗಳಲ್ಲಿ ಮುಂಚೂಣಿಗೆ ಬರಲು, ವರ್ಚಸ್ಸು ಹೆಚ್ಚಲು ಬರೀ ಸರ್ಕಾರದ ಮೇಲೆ ಅವಲಂಬನೆಯಾಗದೆ ಕನ್ನಡಿಗರೇ ರಾಯಭಾರಿಗಳಂತೆ ಕಾರ್ಯನಿರ್ವಹಿಸಬೇಕು ಎಂಬ ಸದಾಶಯವನ್ನು ‘ವಿಜಯವಾಣಿ’ ಆಯೋಜಿಸಿದ್ದ ಸುವರ್ಣ ಕರ್ನಾಟಕ ಸಂವಾದದಲ್ಲಿ ತಜ್ಞರು ವ್ಯಕ್ತಪಡಿಸಿದ್ದಾರೆ. ಇದರ ಸಾಧ್ಯತೆಗಳ ವಿವಿಧ ಆಯಾಮಗಳ ಬಗ್ಗೆಯೂ ರ್ಚಚಿಸಿದ್ದಾರೆ. ಕನ್ನಡದ ವ್ಯಾಪ್ತಿಯೂ ಹಿಗ್ಗಿರುವುದರಿಂದ, ಕನ್ನಡತನದ ಘಮ ಎಲ್ಲ ಕಡೆ ಪಸರಿಸಲು ಕನ್ನಡಿಗರೇ ಮುಂದಾಗಬೇಕಿದೆ.

ಯುವಪೀಳಿಗೆ ಕನ್ನಡವನ್ನು ಬಳಸುವ ಪ್ರಮಾಣ ಕಡಿಮೆಯಾಗುತ್ತಿದೆ, ಮನೆಗಳಿಂದಲೇ ಕನ್ನಡ ಕಣ್ಮರೆಯಾದರೆ ಭಾಷೆಗೆ ಅಪಾಯ ಎಂಬ ಆತಂಕವೂ ಕಾಡುತ್ತಿದೆ. ಈ ಕಳವಳ ದೂರವಾಗಬೇಕಾದರೆ ಬರೀ ಸರ್ಕಾರದ ಪ್ರಯತ್ನಗಳು ಸಾಕಾಗುವುದಿಲ್ಲ. ಮನೆ-ಮನೆಗಳಲ್ಲಿ ಕನ್ನಡ ಬಳಕೆ ವ್ಯಾಪಕವಾಗಬೇಕು. ಅಷ್ಟೇ ಅಲ್ಲ, ನಮ್ಮ ಚಿಂತನೆಗಳ ಅಭಿವ್ಯಕ್ತಿಗೂ ಮಾತೃಭಾಷೆ/ರಾಜ್ಯಭಾಷೆ ಹೆಚ್ಚು ಸಮರ್ಥ ಎಂಬುದು ಗೊತ್ತಿರುವಂಥದ್ದೇ.

ಆಡಳಿತ ಭಾಷೆಯಾಗಿ ಮತ್ತು ಶಿಕ್ಷಣ ಮಾಧ್ಯಮವಾಗಿ ಕನ್ನಡ ಭಾಷೆಯ ಸ್ಥಿತಿಗತಿ, ಸಮಾಜದ ವಿವಿಧಕ್ಷೇತ್ರಗಳಲ್ಲಿನ ಕನ್ನಡದ-ಕನ್ನಡತನದ ಅಸ್ತಿತ್ವ, ಉದ್ಯೋಗಾವಕಾಶಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಇತ್ಯಾದಿ ವಿಷಯಗಳ ಕುರಿತಾದ ಚರ್ಚೆಗಳು ಹಲವು ವರ್ಷಗಳಿಂದ ನಡೆಯುತ್ತಿದ್ದರೂ, ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಲು ಮಾತ್ರ ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಪ್ರಭುತ್ವ ಗಮನ ಹರಿಸಬೇಕಿದೆ.

ಜಾಗತೀಕರಣ, ಉದಾರೀಕರಣದಂಥ ಪರಿಕಲ್ಪನೆಗಳಿಗೆ ತೆರೆದುಕೊಂಡಾಗ ಬಹುಭಾಷೆ, ಬಹುಸಂಸ್ಕೃತಿಯಂಥ ಪರಿಸ್ಥಿತಿಗಳೂ ಅನಿವಾರ್ಯವಾಗುತ್ತವೆ. ಆದರೆ ಇಂಥ ರೆಂಬೆ-ಕೊಂಬೆಗಳನ್ನು ಬೆಳೆಸಿಕೊಳ್ಳುವ ಹಪಹಪಿಯಲ್ಲಿ ಕನ್ನಡ ಭಾಷೆ-ಸಂಸ್ಕೃತಿ-ಪರಂಪರೆ ಎಂಬ ಮೂಲಬೇರುಗಳೇ ನಾಶವಾಗಬಾರದಲ್ಲವೇ? ಕನ್ನಡವನ್ನು, ಕನ್ನಡತನವನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಸರ್ಕಾರಗಳು ನೀತಿ-ನಿರೂಪಣೆ ರೂಪದಲ್ಲಿ ಹತ್ತು ಹಲವು ಉಪಕ್ರಮಗಳಿಗೆ ಮುಂದಾಗಬಹುದು. ಆದರೆ ಜವಾಬ್ದಾರಿಯುತ ನಾಗರಿಕರಾಗಿ ಮತ್ತು ಕನ್ನಡತನದ ಮುಂದುವರಿಕೆಯ ಅಧ್ವರ್ಯುಗಳಾಗಿ ನಮಗೆಲ್ಲರಿಗೂ ಒಂದಷ್ಟು ಜವಾಬ್ದಾರಿಗಳಿವೆ ಎಂಬುದನ್ನು ಮರೆಯಲಾಗದು. ಏಕೆಂದರೆ, ಕನ್ನಡ ಕೇವಲ ಭಾಷೆಯಲ್ಲ, ಅದೊಂದು ವಿಶಿಷ್ಟ ಸಂಸ್ಕೃತಿ. ಹಲವು ಒಳಿತು, ಶ್ರೇಷ್ಠತೆಗಳ ಸಂಗಮ. ಇಂದಿನ ಮಾಹಿತಿ-ತಂತ್ರಜ್ಞಾನ ಯುಗಕ್ಕೂ ಕನ್ನಡ ಒಗ್ಗಿಕೊಂಡಿದ್ದು, ಗ್ಯಾಜೆಟ್​ಗಳಲ್ಲಿ ಸುಲಭವಾಗಿ ಬಳಸಲ್ಪಡುತ್ತಿದೆ. ಹಾಗಾಗಿ, ಭಾಷೆ ಬಗ್ಗೆ ಬರೀ ಕಳವಳ ಪಡುವುದಕ್ಕಿಂತ ಹೊಸ ಸಾಧ್ಯತೆಗಳತ್ತಲೂ ಗಮನ ಹರಿಸಿ ಕನ್ನಡದ ಅಂತಃಸತ್ವವನ್ನು ಹೆಚ್ಚಿಸುವ ಸಂಕಲ್ಪ ನಮ್ಮದಾಗಲಿ. ವಿಜ್ಞಾನ-ತಂತ್ರಜ್ಞಾನದಲ್ಲೂ ಕನ್ನಡದ ವ್ಯಾಪ್ತಿ ಇನ್ನಷ್ಟು ವಿಸ್ತಾರವಾಗಲಿ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net