ಗ್ರಾಮೀಣ ಭಾಗದ ಪತ್ರಕರ್ತರಿಗೆ ಹೆಲ್ತ್​ ಕಾರ್ಡ್​, ಬಸ್ ಪಾಸ್ ಸೌಲಭ್ಯ: ಪತ್ರಕರ್ತರ ಸಮ್ಮೇಳನದಲ್ಲಿ ಸಿಎಂ ಭರವಸೆ

New Project (17)
Published on

ಕಲಬುರಗಿ: ಮುಂದಿನ ಬಜೆಟ್​ನಲ್ಲಿ ಗ್ರಾಮೀಣ ಭಾಗದ ಪತ್ರಕರ್ತರಿಗೆ ಆರೋಗ್ಯ ಕಾರ್ಡ್​ ಮತ್ತು ಬಸ್ ಪಾಸ್ ಸೌಲಭ್ಯ ಒದಗಿಸಲಾಗವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಕಲಬುರಗಿಯ ಪೂಜ್ಯ ಶ್ರೀ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಪತ್ರಕರ್ತರ 36ನೇ ಸಮ್ಮೇಳನದಲ್ಲಿ ಮಂಗಳವಾರ ಮಾತನಾಡಿದ ಸಿಎಂ, ರಾಜಕಾರಣಿಗಳು ಹಾಗೂ ಪತ್ರಕರ್ತರ ನಡುವೆ ಬಿಡಿಸಲಾರದ ನಂಟಿದೆ. ನಮ್ಮನ್ನು ಬಿಟ್ಟು ನೀವು, ನಿಮ್ಮನ್ನು ಬಿಟ್ಟು ನಾವಿರಲು ಆಗುವುದಿಲ್ಲ. ಹಾಗಾಗಿ ‌ನಾವು‌-ನೀವು ಜೊತೆಯಾಗಿ ಸಮಾಜಕ್ಕಾಗಿ ಕೆಲಸ ಮಾಡೋಣ ಎಂದರು. ಒಗ್ಗಟ್ಟನ್ನು ಸಾಧಿಸುವ ಸಲುವಾಗಿ ನಿಮ್ಮಲ್ಲೂ ರಾಜಕಾರಣ ಇರುತ್ತದೆ. ಇದರಿಂದ ನಮಗೆ ಒಳ್ಳೆಯ ಸಲಹೆ ಸಿಗುತ್ತದೆ ಎಂದರು.

ಪತ್ರಿಕಾರಂಗಕ್ಕೆ ಬಹಳ ಸವಾಲುಗಳಿವೆ. ವ್ಯವಸ್ಥೆಯ ಒಳಗಿನ ಲೋಪದೋಷ ಹೊರತರಲು ಅಡ್ಡಿ-ಆತಂಕ ಎದುರಿಸಿ ಸಿಡಿದೆದ್ದಿದೆ. ಹಾಗಾಗಿ ತನ್ನ ಸ್ವಾಮಿತ್ವವನ್ನ ಕಾಪಾಡಿಕೊಂಡು ಬಂದಿದೆ. ಎಡಿಟೋರಿಯಲ್ ಬರೆಯಬೇಕಾದರೆ ಅನುಮತಿ ಪಡೆದುಕೊಳ್ಳಬೇಕಾದ ಸಂದರ್ಭ ಎದುರಾದಾಗಲೂ ಸಂಪಾದಕರು ಹೋರಾಟ ಮಾಡಿ ತಮ್ಮ ಸ್ವಾತಂತ್ರ್ಯವನ್ನ ಉಳಿಸಿಕೊಂಡು ಬಂದಿದ್ದಾರೆ ಎಂದರು.

ವಿಜಯವಾಣಿ ಸಂಪಾದಕ ಕೆ.ಎನ್​.ಚನ್ನೇಗೌಡ ಮಾತನಾಡಿದರು.
ವಿಜಯವಾಣಿ ಸಂಪಾದಕ ಕೆ.ಎನ್​.ಚನ್ನೇಗೌಡ ಮಾತನಾಡಿದರು.

ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ ಮಾತನಾಡಿ, ಸಮಾಜದ ಪ್ರಜ್ಞೆಯ ಪ್ರತೀಕವಾಗಿರುವ ಪತ್ರಕರ್ತರು ತುಂಬಾ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಆದರೆ, ಕರೊನಾದಂತಹ ವಿಷಯ ಕುರಿತು ಜನರಲ್ಲಿ ಅರಿವು ಮೂಡಿಸುವ ಬದಲು ಭೀತಿಯನ್ನುಂಟು ಮಾಡುತ್ತಿರುವುದು ವಿಷಾದನೀಯ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುದ್ರಣ ಕಾಗದದ ಮೇಲಿನ ತೆರಿಗೆಯನ್ನು ಮುಂದಿನ ಜಿಎಸ್​ಟಿ ಸಭೆಯಲಿ ರದ್ದು ಮಾಡಬೇಕು ಎಂದು ಮನವಿ ಮಾಡಿದರು. ಕರೊನಾ ಸಮಯದಲಿ ಮೃತಪಟ್ಟ ಪತ್ರಕರ್ತರಿಗೆ ಪರಿಹಾರ ನೀಡಿದ್ದು ಸ್ವಾಗತಾರ್ಹ. ಆದರೆ, ಪತ್ರಕರ್ತರ ಕಲ್ಯಾಣ ನಿಧಿಗೆ ಅನುದಾನ ಒದಗಿಸಬೇಕು ಎಂದು ಕೆ.ಎನ್​. ಚನ್ನೇಗೌಡ ಆಗ್ರಹಿಸಿದರು.

ವಿಜಯ ಕರ್ನಾಟಕ ಸಂಪಾದಕ ಹರಿಪ್ರಕಾಶ​ ಕೋಣೆಮನೆ ಮಾತನಾಡಿ, ಕರೊನಾದಂತಹ ಮಹಾಮಾರಿಯನ್ನು ಈ ದೇಶ ಯಶಸ್ವಿಯಾಗಿ ಎದುರಿಸಿದೆ. ಸೈನಿಕರು, ಅಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಪತ್ರಕರ್ತರನ್ನು ಭಾರತ ಸರ್ಕಾರ ಕರೊನಾ ವಾರಿಯರ್ಸ್ ಎಂದು ಘೋಷಿಸಿತ್ತು. ಪತ್ರಕರ್ತರು ಕರೊನಾ ಸಂದರ್ಭದಲ್ಲಿ ಸವಾಲನ್ನು ಎದುರಿಸಿ ಕಾರ್ಯನಿರ್ವಹಿಸಿದ್ದರು. ಈ ತಲೆಮಾರಿನ ಪತ್ರಕರ್ತರು ಯುದ್ಧದಂತಹ ವಾತಾವರಣ ನೋಡಿರಲಿಲ್ಲ. ಆದರೆ ಕರೊನಾವನ್ನು ಯುದ್ಧೋಪಾದಿಯಲ್ಲಿ ಕೆಲಸ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮೃತಪಟ್ಟ ‌48 ಪತ್ರಕರ್ತರಿಗೆ ಸರ್ಕಾರ ತಲಾ 5 ರೂಪಾಯಿ ಲಕ್ಷ ಪರಿಹಾರ ಕೊಟ್ಟಿದೆ. ಇದಕ್ಕೆ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಶ್ರಮ ಬಹಳ ಇದೆ ಎಂದರು.

ಪತ್ರಕರ್ತರು ಜವಾಬ್ದಾರಿಯನ್ನು ನೈತಿಕತೆಯ ಹೊಣೆಗಾರಿಕೆಯಲ್ಲಿ ನಿಭಾಯಿಸಬೇಕು. ಡಿಜಿಟಲ್ ಯುಗದ ಪತ್ರಕರ್ತರು ಅತ್ಯಂತ ಕರ್ತವ್ಯಪ್ರಜ್ಞೆಯಿಂದ ಕೆಲಸ ಮಾಡಬೇಕು ಎಂದು ಹರಿಪ್ರಕಾಶ​ ಕೋಣೆಮನೆ ಮನವಿ ಮಾಡಿದರು.

ಪತ್ರಕರ್ತರ ಸಮ್ಮೇಳನದಲ್ಲಿ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಪತ್ರಕರ್ತರ ಸಮ್ಮೇಳನದಲ್ಲಿ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಶಿವಾನಂದ ತಗಡೂರು ಬರೆದಿರುವ 'ಕರೊನಾ ಕಾಲಘಟ್ಟದಲ್ಲಿ' ಹಾಗೂ ಡಾ.ಸ್ವಾಮಿರಾವ್ ಕುಲಕರ್ಣಿ ಬರೆದಿರುವ 'ಮಾಧ್ಯಮ ಹೆಜ್ಜೆಗಳು ಹಾಗೂ ಅವಲೋಕ‌ನ' ಪುಸ್ತಕಗಳು, ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು.

ವೇದಿಕೆಯಲ್ಲಿ ಪೂಜ್ಯ ಶ್ರೀ ಶರಣಬಸವಪ್ಪ ಅಪ್ಪಾ ಕೇಂದ್ರ ಸಚಿವರಾದ ಭಗವಂತ ಖುಬಾ, ಸಂಸದ ಉಮೇಶ ಜಾಧವ, ಸಚಿವ ಮುರುಗೇಶ್​ ನಿರಾಣಿ, ಕೆಕೆಆರ್​ಡಿಬಿ ಅಧ್ಯಕ್ಷ ದತ್ತಾತ್ರೆಯ ಪಾಟೀಲ ರೇವೂರು, ವಿರೋಧ ಪಕ್ಷದ ಮುಖ್ಯ ಸಚೇತಕ ಡಾ.ಅಜಯ್ ಸಿಂಗ್, ಶಾಸಕರಾದ ಸುಭಾಷ್ ಗುತ್ತೇದಾರ, ಅವಿನಾಶ ಜಾಧವ, ಬಸವರಾಜ ಮತ್ತಿಮುಡ, ಎಂಎಲ್​ಸಿ ಬಿ.ಜಿ.ಪಾಟೀಲ್, ಶಶಿಲ್ ನಮೋಸಿ, ಅರಣ್ಯ ಪ್ರಾಧಿಕಾರ ಅಧ್ಯಕ್ಷೆ ತಾರಾ ಅನುರಾಧ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net