ಅಮೆರಿಕಕ್ಕಿಂತಲೂ ದುಬಾರಿ ಚೀನಿ ಕರೊನಾ ಲಸಿಕೆ; ಡಿಸೆಂಬರ್​ನಲ್ಲಿ ಮಾರುಕಟ್ಟೆಗೆ

Corana vaccine
Published on

ನವದೆಹಲಿ: ಕರೊನಾ ಲಸಿಕೆ ವಿಚಾರ ಬಂದಾಗ ರಷ್ಯಾ, ಅಮೆರಿಕ, ಬ್ರಿಟನ್​ ಮೊದಲಾದ ರಾಷ್ಟ್ರಗಳ ಹೆಸರಷ್ಟೇ ಮುಂಚೂಣಿಯಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿವೆ. ಆದರೆ, ಚೀನಾ ಈ ಎಲ್ಲ ರಾಷ್ಟ್ರಗಳಿಗೂ ಪೈಪೋಟಿ ನೀಡುತ್ತಿದೆ.

ಆಯಾ ದೇಶಗಳಲ್ಲಿ ಒಂದೆರಡು ಲಸಿಕೆಗಳು ಮಾತ್ರ ಸಿದ್ಧಗೊಳ್ಳುತ್ತಿದ್ದರೆ, ಚೀನಾವೊಂದರಲ್ಲಿಯೇ ಆರು ಲಸಿಕೆಗಳು ಮಾನವರ ಮೇಲೆ ಪ್ರಯೋಗದ ಅಂತಿಮ ಹಂತದಲ್ಲಿವೆ. ಈಗಾಗಲೇ ಒಂದು ಲಸಿಕೆ ಸೇನೆಯವರ ಬಳಕೆಗೆಂದೇ ನೋಂದಣಿಯೂ ಆಗಿದೆ.

ಇದೀಗ ಚೀನಾದ ಸರ್ಕಾರಿ ಒಡೆತನದ ಸಿನೋಫಾರ್ಮ ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆ ಡಿಸೆಂಬರ್​ ವೇಳೆಗೆ ಮಾರುಕಟ್ಟೆಗೆ ಬರಲಿದ್ದು, ಸಾರ್ವತ್ರಿಕ ಬಳಕೆಗೆ ದೊರೆಯಲಿದೆ. ಈ ಮಾಹಿತಿಯನ್ನು ಕಂಪನಿಯೇ ಬಿಡುಗಡೆ ಮಾಡಿದೆ.

ಚೀನಾದ ಮುಖವಾಣಿ ಗ್ಲೋಬಲ್​ ಟೈಮ್ಸ್​ ಪ್ರಕಾರ ಇದೇ ವರ್ಷದ ಡಿಸೆಂಬರ್​ಗೆ ಲಸಿಕೆ ದೊರೆಯಲಿದೆ. ಲಸಿಕೆಯ ಎರಡು ಡೋಸ್​ಗಳಿಗೆ ಒಂದು ಸಾವಿರ್​ ಯುವಾನ್​ಗೂ ಕಡಿಮೆ ಬೆಲೆ ನಿಗದಿಪಡಿಸಲಾಗುತ್ತದೆ ಎಂದು ಹೇಳಲಾಗಿದೆ. ರೂಪಾಯಿಗಳಲ್ಲಿ ಹೇಳುವುದಾದರೆ ಅಂದಾಜು 10,000 ರೂ.ಗೂ ಅಧಿಕ ಬೆಲೆ ಇರಲಿದೆ.

ಸದ್ಯ ಅಮೆರಿಕದ ಲಸಿಕೆಗೆ ಅಂದಾಜು 2,400 ರೂ.ಗಳಿಂದ 2,800 ರೂ. ವರೆಗೆ ದರ ನಿಗದಿಪಡಿಸಲಾಗಿದೆ. ಚೀನಿ ಲಸಿಕೆ ಅದಕ್ಕಿಂತಲೂ ದುಬಾರಿಯಾಗಿದೆ. ಆದರೆ, ಆಕ್ಸ್​ಫರ್ಡ್​ ವಿವಿ ಲಸಿಕೆ ಭಾರತದಲ್ಲಿ 225 ರೂ.ಗೆ ದೊರೆಯಲಿದೆ. ಸದ್ಯ ಸಿನೋಫಾರ್ಮಾದ ಲಸಿಕೆಯನ್ನು ಯುನೈಟೆಡ್​ ಅರಬ್​ ಎಮಿರೇಟ್ಸ್​ನಲ್ಲಿ ಮಾನವರ ಮೇಲೆ ಅಂತಿಮ ಹಂತದ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದಾಗುತ್ತಿದ್ದಂತೆ ಬೃಹತ್​ ಪ್ರಮಾಣದಲ್ಲಿ ಉತ್ಪಾದನೆ ಆರಂಭೀಸುವ ಉದ್ದೇಶ ಹೊಂದಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net