

ಬೆಂಗಳೂರು: ಬಿಎಂಟಿಸಿ ಬಸ್ ಹರಿದು ಶಾಲೆಗೆ ತೆರಳುತ್ತಿದ್ದ ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ನಡೆದಿದೆ.
ನಾಲ್ಕುವರೆ ವರ್ಷದ ಪೂರ್ವಿ ಮೃತ ಶಾಲಾ ಬಾಲಕಿ. ಬೆಂಗಳೂರು ಇಂಟರ್ ನ್ಯಾಶನಲ್ ಪಬ್ಲಿಲ್ ಸ್ಕೂಲ್ ನಲ್ಲಿ ಫ್ರೀ ಕೆ.ಜಿ. ಓದುತ್ತಿದ್ದ ಬಾಲಕಿ. ಪೂರ್ವಿ ರಾವ್ ತಂದೆ ಪ್ರಸನ್ನ ಸಿಸ್ಕೋ ಕಂಪನಿಯ ಉದ್ಯೋಗಿ. ಪ್ರತಿನಿತ್ಯ ತಂದೆಯೇ ಮಗಳನ್ನ ಶಾಲೆಗೆ ಬಿಟ್ಟು ಕೆಲಸಕ್ಕೆ ಹೋಗ್ತಿದ್ರು, ಎಂದಿನಂತೆ ಇಂದು ಸ್ಕೂಲ್ಗೆ ಬಿಡಲು ಹೋಗುತ್ತಿದ್ದ ವೇಳೆ ಉತ್ತರಹಳ್ಳಿ ಮುಖ್ಯರಸ್ತೆಯ ಪದ್ಮಾವತಿ ಸಿಲ್ಕ್ ಶೋ ರೂಂ ಬಳಿ ಭೀಕರ ಅಪಘಾತ ಸಂಭವಿಸಿದೆ.
ತಂದೆ ಪ್ರಸನ್ನ ಎಂಬುವರು ಮಗಳನ್ನ ಶಾಲೆಗೆ ಬಿಡಲು ಬೈಕ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಬಸ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ತಂದೆ ಪ್ರಸನ್ನ ಎಡಬದಿ ಬಿದ್ರೆ ಮಗಳು ಪೂರ್ವಿ ಬೈಕ್ನ ಬಲಬದಿ ಬಿದ್ದಿದ್ದಾಳೆ. ಈ ವೇಳೆ ಪೂರ್ವಿ ಮೇಲೆ ಬಿಎಂಟಿಸಿ ಬಸ್ ಹರಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.
ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕನನ್ನ ವಶಕ್ಕೆ ಪಡೆದು ಕೆ.ಎಸ್. ಲೇಔಟ್ ಸಂಚಾರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.