

ಶಿವಮೊಗ್ಗ: ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿ ಎಂಬ ಮಾತು ಇದುವರೆಗೆ ನಡೆಯುತ್ತಿತ್ತು. ಆದರೀಗ ಒಂದು ಸುಳ್ಳು ಹೇಳಿ ಮದುವೆ ಮಾಡಿದ್ರೆ ಕಂಬಿ ಹಿಂದೆ ಹೋಗಬೇಕಾಗುತ್ತೆ ಹುಷಾರ್!
ಹೌದು, ಸರ್ಕಾರ ನಿಗದಿಪಡಿಸಿದ ವಯಸ್ಸು ಆಗಿದೆ ಎಂದು ಅಪ್ರಾಪ್ತರಿಗೆ ಮದುವೆ ಮಾಡಿಸಿದರೆ ಕೇಸು ಬೀಳಲಿದೆ. ಕಲ್ಯಾಣ ಮಂದಿರಗಳ ಮಾಲೀಕರು, ಆಡಳಿತ ಮಂಡಳಿ, ಮದುವೆ ಮಾಡಿಸುವ ಅರ್ಚಕರು, ಆಮಂತ್ರಣ ಪತ್ರಿಕೆ ಮುದ್ರಣ ಮಾಡಿಕೊಡುವ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಸೇರಿದಂತೆ ಅಪ್ರಾಪ್ತರ ಮದುವೆಗೆ ಸಹಕಾರ ನೀಡುವ ಪ್ರತಿಯೊಬ್ಬರ ಮೇಲೂ ಕೇಸು ಹಾಕಿ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯಲ್ಲಿ ಈ ಸೂಚನೆ ನೀಡಿದ ಜಿಲ್ಲಾಧಿಕಾರಿ, ಹಲವು ಕ್ರಮಗಳನ್ನು ಕೈಗೊಂಡರೂ ಬಾಲ್ಯವಿವಾಹ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಇನ್ಮುಂದೆ ಬಾಲ್ಯವಿವಾಹ ನಡೆಯುವ ಕಲ್ಯಾಣ ಮಂದಿರ, ದೇವಸ್ಥಾನಗಳ ಸಮಿತಿ ಪ್ರಮುಖರು, ವಿವಾಹ ಮಾಡಿಸುವ ಅರ್ಚಕರು, ಆಮಂತ್ರಣ ಪತ್ರಿಕೆ ಮುದ್ರಿಸುವವರ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂದು ನಿರ್ದೇಶನ ನೀಡಿದರು.
ಬಾಲ್ಯವಿವಾಹ ಕುರಿತು ಜಾಗೃತಿ ಮೂಡಿಸಲು ಡಿಡಿಪಿಐ ಹಾಗೂ ಡಿಡಿಪಿಯು ಅವರು ಪ್ರಾಚಾರ್ಯರು, ಮುಖ್ಯ ಶಿಕ್ಷಕರನ್ನು ಕರೆಸಿ ಮಕ್ಕಳ ಕಲ್ಯಾಣ ಸಮಿತಿ ಸಹಯೋಗದಲ್ಲಿ ಸಭೆ ನಡೆಸಬೇಕು. ಮಕ್ಕಳಲ್ಲಿ ಬಾಲ್ಯವಿವಾಹದ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆ ಮೂಡಿಸಬೇಕು ಎಂದರು.