ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಲೀಕ್​​: ಸೆ.24ರವರೆಗೆ ರಜೆ ಘೋಷಿಸಿದ ಚಂಡೀಗಢ ವಿವಿ, ಮೂವರ ಬಂಧನ

Chandigarh University
Published on

ಚಂಡೀಗಢ: ಪಂಜಾಬ್​ನ ಮೊಹಾಲಿಯಲ್ಲಿರುವ ಚಂಡೀಗಢ ವಿಶ್ವವಿದ್ಯಾಲಯದ ಹಾಸ್ಟೆಲ್​ನ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಚಿತ್ರೀಕರಿಸಿ ಆನ್​ಲೈನ್​ ಮಾಡಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿನಿಯರು ಸೇರಿದಂತೆ ಸಾವಿರಾರು ಮಂದಿ ವಿವಿ ಆವರಣದಲ್ಲಿ ಬೃಹತ್​ ಪ್ರತಿಭಟನೆ ನಡೆಸಿದ್ದು, ಸದ್ಯ ಪ್ರತಿಭಟನೆ ತಣ್ಣಗಾಗಿದೆಯಾದರೂ ಮುಂಜಾಗ್ರತಾ ಕ್ರಮವಾಗಿ ಸೆ.24ರವರೆಗೂ ವಿವಿಗೆ ರಜೆ ಘೋಷಿಸಲಾಗಿದೆ.

ಹಾಸ್ಟೆಲ್​ನಲ್ಲಿ ಸುಮಾರು 60 ವಿದ್ಯಾರ್ಥಿನಿಯರು ಸ್ನಾನ ಮಾಡುತ್ತಿರುವುದನ್ನು ಸಹಪಾಠಿ ವಿದ್ಯಾರ್ಥಿನಿಯೊಬ್ಬಳು ವಿಡಿಯೋ ಮಾಡಿ ಅದನ್ನು ಶಿಮ್ಲಾದಲ್ಲಿರುವ ತನ್ನ ಸ್ನೇಹಿತನಿಗೆ ಕಳುಹಿಸಿದ್ದಾಳೆ. ಅದನ್ನು ಆತ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಮಾಡಿದ್ದಾನೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿನಿಯರು ದೂರಿದ್ದಾರೆ. ಈ ಪ್ರಕರಣ ಸಂಬಂಧ ಆರೋಪಿತ ವಿದ್ಯಾರ್ಥಿನಿಯೊಬ್ಬಳನ್ನು ಬಂಧಿಸಲಾಗಿದ್ದು, ಶಿಮ್ಲಾದಲ್ಲಿ ಈಕೆಯ ಗೆಳೆಯ ಸನ್ನಿ ಮೆಹ್ತಾ ಮತ್ತು ಮತ್ತೊಬ್ಬ ಪರಿಚಿತ ಯುವಕ ರಂಕಜ್ ವರ್ಮಾನನ್ನು ಬಂಧಿಸಲಾಗಿದೆ. ಇನ್ನು ನಿರ್ಲಕ್ಷ್ಯತೆ ಆರೋಪದಡಿ ಇಬ್ಬರು ವಾರ್ಡನ್​ಗಳನ್ನೂ ಕೆಲಸದಿಂದ ಅಮಾನತು ಮಾಡಲಾಗಿದೆ.

60 ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಲೀಕ್​ ಆಗಿದೆ ಎಂಬುದು ವದಂತಿ ಎಂದಿರುವ ಎಡಿಜಿಪಿ ಗುರುಪ್ರೀತ್​ ಕೌರ್​ ದೇವ್​, ಬಂಧಿತ ವಿದ್ಯಾರ್ಥಿನಿಯು ತನ್ನ ಸ್ನೇಹಿತನಿಗೆ ಕಳುಹಿಸಿದ್ದ ಖಾಸಗಿ ವಿಡಿಯೋ ಮಾತ್ರ ಸೋರಿಕೆಯಾಗಿದೆ. 60 ವಿದ್ಯಾರ್ಥಿನಿಯರಿಗೆ ಸಂಬಂಧಿಸಿದ ವಿಡಿಯೋ ಪ್ರಾಥಮಿಕ ತನಿಖೆಯಲ್ಲಿ ದೊರಕಿಲ್ಲ ಎಂದಿದ್ದಾರೆ.

ಇನ್ನು ಖಾಸಗಿ ವಿಡಿಯೋ ಲೀಕ್​ ಆಗಿದೆ ಎಂಬ ಸುದ್ದಿ ಕೇಳಿ ಹಾಸ್ಟೆಲ್​ನಲ್ಲಿ 7 ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಆದರೆ ಅದನ್ನು ವಿವಿ ಕುಲಪತಿ ಹಾಗೂ ಮೊಹಾಲಿ ಪೊಲೀಸ್​ ವರಿಷ್ಠಾಧಿಕಾರಿ ವಿವೇಕ್​ ಸೋನಿ ನಿರಾಕರಿಸಿದ್ದಾರೆ. ಆತಂಕದಿಂದ ಬಳಲುತ್ತಿದ್ದ ಒಬ್ಬ ವಿದ್ಯಾರ್ಥಿನಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪಂಜಾಬ್​ ಸರ್ಕಾರ, ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ನಿಷ್ಪಕ್ಷಪಾತ ಮತ್ತು ಪ್ರಾಮಾಣಿಕವಾಗಿ ತನಿಖೆ ನಡೆಸಲಾಗುವುದು ಎಂದು ಪೊಲೀಸ್​ ಅಧಿಕಾರಿಗಳು ವಿದ್ಯಾರ್ಥಿನಿಯರಿಗೆ ಭರವಸೆ ನೀಡಿದ್ದಾರೆ.

'ನಾವು ಯಾವಾಗಲೂ ನಮ್ಮ ವಿದ್ಯಾರ್ಥಿಗಳೊಂದಿಗೆ ಇರುತ್ತೇವೆ, ಶೈಕ್ಷಣಿಕ ಹಾಗೂ ಸುರಕ್ಷತೆ ಮತ್ತು ಯೋಗಕ್ಷೇಮದತ್ತ ನಮ್ಮ ಬದ್ಧತೆ ಇದೆ' ಎಂದು ವಿಶ್ವವಿದ್ಯಾಲಯ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net