ಸುರಕ್ಷತಾ ಕ್ರಮಗಳ ಸುಧಾರಣೆಗೆ ಸವಾಲು: ಹಳಿ ತಪ್ಪಿದ ಬದುಕು

Train Accident
Published on

ನವದೆಹಲಿ: 20 ವರ್ಷಗಳಲ್ಲೇ ಭೀಕರವಾದ ಅವಘಡವು ಸುರಕ್ಷತಾ ಕ್ರಮಗಳನ್ನು ಸುಧಾರಿಸುವ ಯೋಜನೆಗೆ ಸವಾಲಾಗಿದೆ. ಕಳೆದ ಕೆಲವು ವರ್ಷಗಳಿಂದ ಸುರಕ್ಷತಾ ಕಾರ್ಯ ಸುಧಾರಿಸುತ್ತಿದೆ. ಆದರೆ, ಈ ರೀತಿ ಅಪಘಾತಗಳು ಹೊಸ ಹೊಸ ಸವಾಲುಗಳನ್ನು ತಂದೊಡ್ಡುತ್ತವೆ ಎಂದು ಛತ್ತೀಸ್​ಗಢದ ಕಿರೋಡಿಮಲ್ ತಂತ್ರಜ್ಞಾನ ಸಂಸ್ಥೆಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್ ಸೇನ್ ಹೇಳಿದ್ದಾರೆ.

‘ಭಾರತದಲ್ಲಿ ರೈಲು ಹಳಿತಪು್ಪವಿಕೆಗೆ ಕಾರಣಗಳು ಮತ್ತು ಪರಿಹಾರ ಕ್ರಮಗಳು’ ಎಂಬ 2020ರ ಅಧ್ಯಯನ ವರದಿಯೊಂದರ ಪ್ರಮುಖ ಲೇಖಕರಾಗಿದ್ದಾರೆ ಸೇನ್.

ಬಹಳ ನಿಧಾನ: ರೈಲ್ವೆ ಜಾಲದಾದ್ಯಂತ ಅಪಘಾತ ನಿರೋಧಕ ಸಾಧನಗಳು ಮತ್ತು ತುರ್ತು ಎಚ್ಚರಿಕೆ ವ್ಯವಸ್ಥೆಯಂಥ ಸುರಕ್ಷತಾ ಕ್ರಮಗಳನ್ನು ಅಳವಡಿಸುವಲ್ಲಿ ಭಾರತೀಯ ರೈಲ್ವೆ ತುಂಬಾ ನಿಧಾನವಾಗಿದೆ ಎಂದು ‘ಇಂಟರ್​ನ್ಯಾಷನಲ್ ರೈಲ್ವೆ ಜರ್ನಲ್’ ಲೇಖಕ ಹಾಗೂ ಸ್ವತಂತ್ರ ಸಾರಿಗೆ ತಜ್ಞ ಶ್ರೀನಾದ್ ಝಾ ಅಭಿಪ್ರಾಯ ಪಟ್ಟಿದ್ದಾರೆ. ಶುಕ್ರವಾರ ಅಪಘಾತ ನಡೆದ ಮಾರ್ಗದಲ್ಲಿ ‘ಕವಚ್’ ಇರಲಿಲ್ಲ ಎನ್ನುವುದು ಗಮನಾರ್ಹವಾಗಿದೆ.

ಸುರಕ್ಷತೆಗೆ ಆದ್ಯತೆ: ಪ್ರಯಾಣಿಕರ ಸುರಕ್ಷತೆಗೆ ಭಾರತೀಯ ರೈಲ್ವೆ ಆದ್ಯತೆ ನೀಡುತ್ತದೆ ಎಂದು ರೈಲ್ವೆ ಸಚಿವಾಲಯದ ವಕ್ತಾರರೊಬ್ಬರು ಭಾನುವಾರ ಹೇಳಿದ್ದಾರೆ. ಈಗ ಒಂದು ಅಪಘಾತ ಸಂಭವಿಸಿರುವುದರಿಂದ ಸುರಕ್ಷತೆ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ರೈಲು ಅಪಘಾತಗಳ ಪ್ರಮಾಣ ಗಣನೀಯವಾಗಿ ತಗ್ಗಿದೆ. ಅನೇಕ ವರ್ಷಗಳಿಂದ ಯಾವುದೇ ದೊಡ್ಡ ಅಪಘಾತಗಳು ಸಂಭವಿಸಿಲ್ಲ ಎಂದು ವಿವರಿಸಿದ್ದಾರೆ.

0.03ಗೆ ಇಳಿದ ಪ್ರಮಾಣ: ತಲಾ ಹತ್ತು ಲಕ್ಷ ರೈಲು ಕಿಲೋ ಮೀಟರ್​ಗೆ ಅಪಘಾತ ಸಂಖ್ಯೆ 2013-14ರಲ್ಲಿ 0.10 ಇದ್ದದ್ದು 2021-22ರಲ್ಲಿ 0.03ಗೆ ಇಳಿದಿದೆ ಎಂದು ರೈಲ್ವೆ ವಕ್ತಾರರು ಗಮನ ಸೆಳೆದಿದ್ದಾರೆ.

ಪ್ರಧಾನಿ ಮೋದಿಯವರು ಹೊಸ ರೈಲಿಗೆ ಹಸಿರು ನಿಶಾನೆ ತೋರುವುದರಲ್ಲಿ ಮಗ್ನರಾಗಿದ್ದಾರೆ ಹೊರತು ಪ್ರಯಾಣಿಕರ ಸುರಕ್ಷತೆ ಬಗ್ಗೆ ಗಮನ ನೀಡುತ್ತಿಲ್ಲ. ಒಡಿಶಾದ ಬಾಲಾಸೋರ್ ಬಳಿ ಸಂಭವಿಸಿದ ತ್ರಿವಳಿ ರೈಲು ದುರಂತ ಲೋಪದ ಬಗ್ಗೆ ಕೆಳಹಂತದಿಂದ ಹಿಡಿದು ಮೇಲಿನ ಹಂತದವರೆಗೆ ಹೊಣೆಗಾರಿಕೆ ನಿಗದಿಯಾಗಬೇಕು. ಸರ್ಕಾರ ಯಾರನ್ನೂ ರಕ್ಷಿಸುವ ಕಾರ್ಯ ಮಾಡಬಾರದು. | ಎಂ.ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಸಾವಿನ ಸಂಖ್ಯೆ 275: ಶುಕ್ರವಾರ ರೈಲು ಅಪಘಾತದಲ್ಲಿ ಮಡಿದವರ ಸಂಖ್ಯೆ 275 ಎಂಬುದಾಗಿ ಪ್ರಕಟಿಸಲಾಗಿದೆ. ಶವಗಳನ್ನು ಎಣಿಸುವಾಗ ಕೆಲವು ಸಾವುಗಳ ಎಣಿಕೆ ಪುನರಾವರ್ತನೆ ಯಾಗಿರುವುದರಿಂದ 288 ಎಂದು ದಾಖಲಿಸಲಾಗಿತ್ತು. ಆದರೆ ವಾಸ್ತವವಾಗಿ ಅದು 275 ಆಗಿದೆ ಎಂದು ಒಡಿಶಾದ ಮುಖ್ಯ ಕಾರ್ಯದರ್ಶಿ ಪಿ.ಕೆ. ಜೆನಾ ಭಾನುವಾರ ತಿಳಿಸಿದ್ದಾರೆ.

ಒಡಿಶಾ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ: ರೈಲು ಅಪಘಾತದಲ್ಲಿ ಸಾವನ್ನಪ್ಪಿದವರ ಕುಟುಂಬದವರಿಗೆ ತಲಾ 5 ಲಕ್ಷ ರೂ., ಗಂಭೀರವಾಗಿ ಗಾಯಗೊಂಡವರಿಗೆ 1 ಲಕ್ಷ ರೂ., ಪರಿಹಾರವನ್ನು ಒಡಿಶಾದ ಸಿಎಂ ನವೀನ್ ಪಟ್ನಾಯಕ್ ಘೋಷಿಸಿದ್ದಾರೆ. ರೈಲು ದುರಂತದ ಪರಿಹಾರ ಕಾರ್ಯ ಕುರಿತು ಪ್ರಧಾನಿ ಮೋದಿ ಜತೆ ಭಾನುವಾರ ದೂರವಾಣಿಯಲ್ಲಿ ಮಾತನಾಡಿರುವುದಾಗಿ ತಿಳಿಸಿದ್ದಾರೆ.

137 ಮಂದಿ ಚೆನ್ನೈಗೆ: ಅಪಘಾತಕ್ಕೀಡಾದ ಕೋರಮಂಡಲ್ ಎಕ್ಸ್​ಪ್ರೆಸ್​ನಲ್ಲಿದ್ದ ಪ್ರಯಾಣಿಕರ ಪೈಕಿ 137 ಜನರ ತಂಡ ವಿಶೇಷ ರೈಲಿನ ಮೂಲಕ ಚೆನ್ನೈ ತಲುಪಿದೆ. ಇವರಲ್ಲಿ ಚಿಕಿತ್ಸೆ ಅಗತ್ಯವಿದ್ದ 36 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜ್ಯದ ಇನ್ನೂ 8 ಮಂದಿ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ತಮಿಳುನಾಡು ಸರ್ಕಾರ ಹೇಳಿದೆ.

ಮೊದಲು ಮಾಹಿತಿ ರವಾನೆ: ರೈಲು ಅಪಘಾತದ ಬಗ್ಗೆ ತುರ್ತು ಸೇವೆಗೆ ಮೊದಲು ಮಾಹಿತಿ ನೀಡಿದ್ದು, ಎನ್​ಡಿಅರ್​ಎಫ್ ಕಾನ್​ಸ್ಟೆಬಲ್ ಎನ್.ಕೆ. ವೆಂಟಕೇಶ್. ಹೌರಾದಿಂದ ಚೆನ್ನೈಗೆ ಪಯಣಿಸುತ್ತಿದ್ದ ಇವರು, ತಮ್ಮ ಕೋಲ್ಕತ್ತದ ಕೇಂದ್ರ ಕಚೇರಿಗೆ ಘಟನಾ ಸ್ಥಳದ ಲೈವ್ ಲೋಕೇಷನ್ ಮತ್ತು ಚಿತ್ರಗಳನ್ನು ಮೊಬೈಲ್​ನಲ್ಲಿ ರವಾನಿಸಿದ್ದರು.

ನ್ಯಾಯಾಂಗ ತನಿಖೆಗೆ ಅರ್ಜಿ: ಶುಕ್ರವಾರದ ರೈಲು ಅಪಘಾತ ಕುರಿತು ನ್ಯಾಯಾಂಗ ತನಿಖೆಗೆ ನಿರ್ದೇಶನ ಕೋರಿ ವಕೀಲ ವಿಶಾಲ್ ತಿವಾರಿ ಎಂಬುವವರು ಸುಪ್ರೀಂ ಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು (ಪಿಐಎಲ್) ಸಲ್ಲಿಸಿದ್ದಾರೆ. ರೈಲ್ವೆ ಸುರಕ್ಷತೆಯ ಕವಚ್ ಯೋಜನೆ ಅನುಷ್ಠಾನ ತ್ವರಿತ ಜಾರಿಗೂ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.

ಪ್ರಮುಖಾಂಶಗಳು

  • ಹಸಿರು ನಿಶಾನೆ ಇದ್ದ ಕಾರಣವೇ ರೈಲು ನಿಲ್ದಾಣದ ಕಡೆಗೆ ಮುಂದುವರಿಯಿತು ಎಂದಿರುವ ಹಿರಿಯ ಅಧಿಕಾರಿಗಳು, ಕೋರಮಂಡಲ್ ಎಕ್ಸ್​ಪ್ರೆಸ್ ರೈಲಿನ ಚಾಲಕನಿಂದ ಪ್ರಮಾದ ಆಗಿಲ್ಲ ಎಂದಿದ್ದಾರೆ.
  • ದುರಂತಕ್ಕೀಡಾದ ರೈಲಿನಲ್ಲಿ ಆಂಧ್ರಪ್ರದೇಶದ 700ಕ್ಕೂ ಹೆಚ್ಚು ಜನರಿದ್ದರು. ಓರ್ವ ಸಾವನ್ನಪ್ಪಿದ್ದು, ಬಹುತೇಕರಿಗೆ ಯಾವುದೇ ಅಪಾಯ ಆಗಿಲ್ಲ ಎಂದು ಆಂಧ್ರದ ಸಚಿವ ಬಿ.ಸತ್ಯನಾರಾಯಣ ಹೇಳಿದ್ದಾರೆ.
  • ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಸಂಸತ್ತಿನಲ್ಲಿ ಮಂಡಿಸಿದ್ದ ಮಹಾ ಲೆಕ್ಕ ಪರಿಶೋಧಕರ ವರದಿ, ರೈಲ್ವೆ ಸುರಕ್ಷತೆ ವಿಚಾರದಲ್ಲಿ ಗಂಭೀರ ಲೋಪದೋಷಗಳಿವೆ ಎಂಬುದನ್ನು ಗಮನಕ್ಕೆ ತಂದು ಎಚ್ಚರಿಕೆ ನೀಡಿತ್ತು.
  • ಪಶ್ಚಿಮ ಬಂಗಾಳದ ಪ್ರಯಾಣಿಕರ ಪೈಕಿ 61 ಮಂದಿ ಸಾವನ್ನಪ್ಪಿದ್ದು, 182 ಜನರ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.
  • ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಬಂಧಿಗಳು ಮತ್ತು ಅಪಘಾತ ಸಂತ್ರಸ್ತರ ವಿಮಾ ಕ್ಲೇಮ್ ಪ್ರಕ್ರಿಯೆಯನ್ನು ಸರಳಗೊಳಿಸಿದ ಎಲ್​ಐಸಿ.
  • ರೈಲು ಅಪಘಾತವನ್ನು ಕೋಮು ದ್ವೇಷ ಹರಡಲು ಬಳಕೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗವುದೆಂದು ಒಡಿಶಾ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
  • ಅಪಘಾತದಲ್ಲಿ ಪಾಲಕರನ್ನು ಕಳೆದುಕೊಂಡ ಮಕ್ಕಳ ಶಿಕ್ಷಣದ ಹೊಣೆಯನ್ನು ವಹಿಸಿಕೊಳ್ಳುವುದಾಗಿ ಘೋಷಿಸಿದ ಉದ್ಯಮಿ ಗೌತಮ್ ಅದಾನಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net