

ಕಲಬುರಗಿ: ಅಫಜಲಪುರ ಹೊರ ವಲಯದದಲ್ಲಿ ಶುಕ್ರವಾರ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ರಕ್ತಸಿಕ್ತವಾಗಿ ವಾಹನಕ್ಕೆ ಅಂಟಿಕೊಂಡಿದ್ದ ಮೃತದೇಹಗಳನ್ನ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಅಫಜಲಪುರ ತಾಲೂಕಿನ ಗಾಣಗಾಪುರದಿಂದ ಮಹಾರಾಷ್ಟ್ರ ಕಡೆ ಹೊರಟಿದ್ದ ಕಾರು ಮಾರ್ಗಮಧ್ಯೆ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ಡ್ರೈವರ್ ಹಾಗೂ ನಾಲ್ವರು ಮಹಿಳೆಯರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿರು ಇಬ್ಬರು ಬಾಲಕಿಯರು ಮತ್ತು 2 ವರ್ಷದ ಮಗುವನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ ಅಫಜಲಪುರ ತಾಲೂಕಿನ ದೇವಲಗಾಣಗಾಪುರದ ದತ್ತಾತ್ರೇಯನ ದರ್ಶನ ಮಾಡಿಕೊಂಡು ವಾಪಸ್ ಹೋಗುತ್ತಿದ್ದರು.
ಕಾರು ಚಾಲಕನಿಗೆ ನಿದ್ರೆಗೆ ಜಾರಿದ್ದರಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಮೃತರ ಬಗ್ಗೆ ಮಾಹಿತಿ ಲಭ್ಯ ಆಗಬೇಕಿದೆ. ಸ್ಥಳಕ್ಕೆ ಅಫಜಲಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.