

ತುಮಕೂರು: ಕೆನಡಾದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿರುವ ಕರ್ನಾಟಕದ ಚಂದ್ರ ಆರ್ಯ ಅವರು ಕೆನಡಾ ಪಾರ್ಲಿಮೆಂಟ್ನಲ್ಲಿ ಕನ್ನಡದಲ್ಲೇ ಭಾಷಣ ಮಾಡಿದ್ದು, ಕನ್ನಡಿಗರ ಪಾಲಿಗೆ ಅವಿಸ್ಮರಣೀಯ ಕ್ಷಣ. ಚಂದ್ರ ಆರ್ಯ ಅವರಲ್ಲಿನ ಕನ್ನಡಾಭಿಮಾನ ಕಂಡು ನಾಡಿನ ಜನತೆ ಹೆಮ್ಮೆ ಪಟ್ಟಿದ್ದಾರೆ. ಅವರ ಭಾಷಣದ ವಿಡಿಯೋ ತುಣುಕನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡು ಪ್ರೀತಿ-ಅಭಿಮಾನದ ಮಳೆಯನ್ನೇ ಸುರಿಸುತ್ತಿದ್ದಾರೆ. ಈ ಕುರಿತು ಚಂದ್ರಆರ್ಯ ಅವರ ಚಿಕ್ಕಪ್ಪ ತಿಮ್ಮಣ್ಣ ಮತ್ತು ಚಿಕ್ಕಮ್ಮ ಜಯಮ್ಮ ಅವರು ತುಮಕೂರಲ್ಲಿ 'ದಿಗ್ವಿಜಯ ನ್ಯೂಸ್' ಜೊತೆ ಖುಷಿಯಿಂದ ಮಾತನಾಡುತ್ತಾ ಮಹತ್ತರ ವಿಚಾರ ಹಂಚಿಕೊಂಡಿದ್ದಾರೆ.
ನನ್ನ ಅಣ್ಣನ ಮಗ ಹೊರದೇಶಕ್ಕೆ ಹೋಗಿ ಸಂಸದರಾಗಿರುವುದು ಹೆಮ್ಮೆಯ ವಿಚಾರ. 15 ವರ್ಷಗಳ ಹಿಂದೆ ಕೆನಡಾಗೆ ಹೋದರು. ಪತ್ನಿ ಇಂಜಿನಿಯರ್ ಆಗಿದ್ದರು, ಹೀಗಾಗಿ ಅವರ ಜೊತೆಗೆ ಕೆನಡಾಗೆ ಹೋದರು. ನನ್ನ ಅಣ್ಣ ಕಮರ್ಷಿಯಲ್ ಟ್ಯಾಕ್ಸ್ ಆಫೀಸರ್ ಆಗಿದ್ದರು. ವರ್ಗಾವಣೆಯಾದಂತೆ ಅವರ ಜೊತೆಗೆ ಹೋಗಿ ಬಳ್ಳಾರಿ, ಬೆಂಗಳೂರು ಕಡೆಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಇಂಜಿನಿಯರ್ ಓದಿರುವ ಚಂದ್ರ ಆರ್ಯ, ಕೆನಡಾದಿಂದ ಕರ್ನಾಟಕಕ್ಕೆ ವರ್ಷಕ್ಕೆ ಅಥವಾ ಆರು ತಿಂಗಳಿಗೊಮ್ಮೆ ದೇವರ ಕಾರ್ಯ ಮಾಡುವಾಗ, ಜಾತ್ರೆಗಳ ಸಮಯದಲ್ಲಿ ಬರ್ತಾರೆ. ವಾರಕ್ಕೊಮ್ಮೆಯಾದರೂ ನನ್ನ ಅಣ್ಣ ಅಂದರೆ ಅವರ ತಂದೆಗೆ ಕರೆ ಮಾಡಿ ಮಾತನಾಡುತ್ತಾರೆ. ಕಳೆದ ಬಾರಿ ಬಂದಾಗ ದೇವರ ಕಾರ್ಯಕ್ಕೆ ಒಂದು ಲಕ್ಷ ಹಣ ಕೂಡ ಕೊಟ್ಟು ಹೋಗಿದ್ದರು ಚಿಕ್ಕಪ್ಪ ತಿಮ್ಮಣ್ಣ ವಿವರಿಸಿದರು.
ನಮ್ಮದು ಒಟ್ಟು 7 ಜನರ ಕುಟುಂಬ. ಮೂವರು ಇಂಜಿನಿಯರಿಂಗ್ ಮಾಡಿದ್ದಾರೆ. ಉಳಿದವರು ಊರಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಚಂದ್ರ ಆರ್ಯ ಹೊರ ದೇಶದಲ್ಲಿ ಸಂಸದರಾಗಿರುವುದು ಖುಷಿಯ ವಿಚಾರ. ಇದರಿಂದ ನಮ್ಮ ಕುಟುಂಬಕ್ಕೆ ದೊಡ್ಡ ಹೆಸರು ಬಂದಿದೆ. ಸಂಸತ್ನಲ್ಲಿ ಕನ್ನಡದಲ್ಲಿ ಮಾತನಾಡಿದ್ದು ಕೇಳಿ ತುಂಬಾ ಖುಷಿಯಾಯ್ತು ಎಂದರು.
ಕೆನಡಾದಲ್ಲಿ ನೆಲೆಸಿರುವ ಚಂದ್ರ ಆರ್ಯ ಅವರು ಕರ್ನಾಟಕದ ತುಮಕೂರು ಜಿಲ್ಲೆ ಶಿರಾ ತಾಲೂಕು ದ್ವಾರಾಳು ಗ್ರಾಮದ ಮೂಲದವರು. ಕೆ.ಗೋವಿಂದಯ್ಯ ಮತ್ತು ಜಯಮ್ಮ ದಂಪತಿಯ ಪುತ್ರ. ಇವರ ಪಾಲಕರು ಸದ್ಯ ಬೆಂಗಳೂರಲ್ಲಿ ನೆಲೆಸಿದ್ದಾರೆ.