ಬಿಎಸ್​ವೈ- ಬೊಮ್ಮಾಯಿ‌ ರಹಸ್ಯ ಮಾತುಕತೆ, ಸದನದಲ್ಲಿ ಒಗ್ಗಟ್ಟಿನ ಜಪ

BB BSY
Published on

ಬೆಳಗಾವಿ: ಸುವರ್ಣ ವಿಧಾನಸೌಧದ ಸಿಎಂ ಕೊಠಡಿಯಲ್ಲಿ ಬಸವರಾಜು ಬೊಮ್ಮಾಯಿ‌ ಹಾಗೂ ಬಿ.ಎಸ್. ಯಡಿಯೂರೂಪ್ಪ ರಹಸ್ಯ ಮಾತುಕತೆ ನಡೆಸಿದರು. ಈ ಗುಪ್ತ ಮಾತುಕತೆಗೆ ಮುನ್ನ ಬೇರೊಂದು ಸ್ಥಳದಲ್ಲಿ ಬಿಎಸ್​ವೈ ಅವರನ್ನು ಸಚಿವರಾದ ಬೈರತಿ‌ ಬಸವರಾಜ ಹಾಗೂ ಮುನಿರತ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.

ಶುಕ್ರವಾರ ಅಧಿವೇಶನಕ್ಕೆ ಹೋಗುವ ಮುನ್ನ ನೇರ ಬೊಮ್ಮಾಯಿ‌ ಕೊಠಡಿಗೆ ಧಾವಿಸಿದ ಯಡಿಯೂರಪ್ಪ, ಕಾರ್ಯಕಲಾಪ, ಪ್ರತಿಪಕ್ಷ ಪ್ರಸ್ತಾಪಿಸಬಹುದಾದ ವಿಷಯಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡರು. ಸದನದಲ್ಲಿ ಮೂಲ-ವಲಸಿಗ ಎಂಬ ಬೇಧವಿಲ್ಲ. ಒಗ್ಗಟ್ಟಿನಿಂದ ಪ್ರತಿಪಕ್ಷಗಳನ್ನು ಎದುರಿಸಬೇಕು. ಯಾವುದೇ ಸಚಿವ ಹಾಗೂ ಶಾಸಕರ ವಿರುದ್ಧ ವೈಯಕ್ತಿಕ ಆರೋಪ‌ ಕೇಳಿಬಂದರೂ ಸಮರ್ಥ ನೀಡಲು ಎಲ್ಲರಿಗೂ ಸೂಚಿಸಬೇಕು ಎಂದು ಬೊಮ್ಮಾಯಿ‌ಗೆ ಬಿಎಸ್​ವೈ ಸಲಹೆ ನೀಡಿದರು.

ಪ್ರತಿಪಕ್ಷ ಕಾಂಗ್ರೆಸ್ ಪಕ್ಷ ಗಂಭೀರವಾದ ವಿಷಯ ಪ್ರಸ್ತಾಪಿಸಲು ಸಿದ್ಧತೆ ನಡೆಸಿರುವ ಬಗ್ಗೆ ಕೆಲವರಿಗೆ ಸುಳಿವು ಸಿಕ್ಕಿದೆ ಎಂಬ ಅಂಶವು ವಿಧಾನಸೌಧ ಮೊಗಸಾಲೆಯಲ್ಲಿ ಗುಸುಗುಸು ಚರ್ಚೆಗೆ ಎಡೆಮಾಡಿಕೊಟ್ಟಿತ್ತು.

ಸಚಿವ ಬೈರತಿ ಬಸವರಾಜ ವಿರುದ್ಧ ಭೂ ಕಬಳಿಕೆ ಆರೋಪ ಪ್ರಕರಣ ಹಾಗೂ ಸಚಿವರ ರಾಜೀನಾಮೆಗೆ ಒತ್ತಾಯವು ಕೋಲಾಹಲ ಸೃಷ್ಟಿಸಿ, ಪ್ರತಿಪಕ್ಷ ನಾಯಕ ಸೇರಿದಂತೆ ಕಾಂಗ್ರೆಸ್ ಸದಸ್ಯರನ್ನು ದಿನದ ಮಟ್ಟಿಗೆ ಕಲಾಪದಿಂದ ಸಭಾಪತಿ ಅಮಾನತು ಮಾಡಿದ್ದರು. ಗುರುವಾರವೂ ಇದೇ ಬೇಡಿಕೆಗೆ ಕಾಂಗ್ರೆಸ್ ಹಿಡಿದ ಪಟ್ಟು ಮೊದಲ ಅರ್ಧ ದಿನದ ಕಲಾಪ ನುಂಗಿ ಹಾಕಿತ್ತು. ಸಭಾಪತಿ ಕೊಠಡಿಯಲ್ಲಿ ರಾಜಿಸಂಧಾನ, ಭೋಜನ ವಿರಾಮದ ಬಳಿಕ ಸದನ ಮತ್ತೆ ಸೇರಿದಾಗ ಸರ್ಕಾರ ವಿಷಾದ ವ್ಯಕ್ತಪಡಿಸಿತು. ಹೀಗಾಗಿ ಕಲಾಪ ಸುಸೂತ್ರವಾಗಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net