ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮದ ಸುಳಿವು, ಕಾಂಗ್ರೆಸ್​ ನಾಯಕರೇ ಈ ಬಗ್ಗೆ ಜನರಿಗೆ ಉತ್ತರ ಕೊಡಿ: ಬಿಎಸ್​ವೈ ಆಗ್ರಹ

bsy - siddaramaiah
Published on

ಶಿವಮೊಗ್ಗ: ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ನಡೆದಿರುವ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮದ ಸುಳಿವು ಸಿಕ್ಕಿದೆ. ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಕೀಳುಮಟ್ಟದ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್​ ನಾಯಕರೇ, ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ನಡೆದ ಅಕ್ರಮದ ಬಗ್ಗೆ ಜನರಿಗೆ ಉತ್ತರ ನೀಡಿ ಎಂದು ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಆಗ್ರಹಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್​ವೈ, ಶಿಕ್ಷಕರ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ತನಿಖೆ ಬಿರುಸುಗೊಂಡಿದೆ. ಹಲವರನ್ನು ಈಗಾಗಲೇ ಬಂಧಿಸಲಾಗಿದೆ. ಶೀಘ್ರದಲ್ಲೇ ರಾಜ್ಯದ ಜನರಿಗೆ ವಾಸ್ತವ ಸಂಗತಿ ತಿಳಿಯಲಿದೆ. ಕಾಂಗ್ರೆಸ್​ನವರು ಮೂರು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿಕೊಂಡಿದ್ದಾರೆ ಎಂದು ರಮೇಶ್​ ಕುಮಾರ್​ ಹೇಳಿದ್ದರು. ಈ ಮಾತು ನಿಜ ಎಂಬುದು ಸಾಬೀತಾಗುತ್ತಿದೆ ಎಂದರು.

ಕಾಂಗ್ರೆಸ್​ನವರು ಮೂರು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿಕೊಂಡಿದ್ದೇವೆ ಎಂದು ರಮೇಶ್​ಕುಮಾರ್​ ಬಹಿರಂತ ಸಭೆಯಲ್ಲಿ ಹೇಳಿದ್ದನ್ನು ಸೋನಿಯಾ ಗಾಂಧಿ, ರಾಹುಲ್​ ಗಾಂಧಿ, ಕಡೇ ಪಕ್ಷ ಸಿದ್ದರಾಮಯ್ಯ ಕೂಡ ಅಲ್ಲಗಳೆದಿಲ್ಲ. ಕಾಂಗ್ರೆಸ್​ ಅಧಿಕಾರದಲ್ಲಿದ್ದಾಗ ಜನಪರವಾಗಿ ಚಿಂತನೆ ಮಾಡಿಲ್ಲ ಎಂಬುದಕ್ಕೆ ಇದೇ ನಿದರ್ಶನ ಎಂದು ಬಿಎಸ್​ವೈ ವಾಗ್ದಾಳಿ ನಡೆಸಿದರು.

ತಮ್ಮ ಅವಧಿಯಲ್ಲಿ ಅಕ್ರಮ ನಡೆಸಿದ ಕಾಂಗ್ರೆಸ್​ ಮುಖಂಡರು ಈಗ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಪೋಸ್ಟರ್​ ರಾಜಕೀಯ ಮಾಡುತ್ತಿದ್ದಾರೆ. ಇದರ ವಿರುದ್ಧ ದೂರು ದಾಖಲಿಸಿದ್ದೇವೆ. ಇಂತಹ ಕೀಳು ಮಟ್ಟದ ರಾಜಕೀಯ ಕಾಂಗ್ರೆಸ್​ನವರಿಗೆ ಶೋಭೆ ತರುವುದಿಲ್ಲ ಎಂದು ಯಡಿಯೂರಪ್ಪ ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net