ಒಬ್ಬಳಿಗಾಗಿ ಇಬ್ಬರ ಗಲಾಟೆ: ಪ್ರಿಯತಮೆ-ನಗರಸಭೆ ಸದಸ್ಯನ ಕಿರುಕುಳ... ಚಿಕ್ಕಬಳ್ಳಾಪುರದಲ್ಲಿ ನಡೆಯಿತು ಘೋರ ದುರಂತ

cbp love case
Published on

ಚಿಕ್ಕಬಳ್ಳಾಪುರ: ನನ್ನ ಸಾವಿಗೆ ಚಿಕ್ಕಬಳ್ಳಾಪುರ ನಗರಸಭೆ ಸದಸ್ಯ ಅಂಬರೀಷ್​ ಕಾರಣ ಎಂದು ವಾಟ್ಸ್​ಆ್ಯಪ್​ ಸ್ಟೇಟಸ್​ ಹಾಕಿ ಭಗ್ನಪ್ರೇಮಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಎಲ್​ಐಸಿ ಕಚೇರಿ ಮುಂಭಾಗದ ಮನೆಯಲ್ಲಿ ಸಂಭವಿಸಿದೆ. ಇದಕ್ಕೆ ಪ್ರಿಯತಮೆ ಹಾಗೂ ನಗರಸಭೆ ಸದಸ್ಯನ ಕಿರುಕುಳವೇ ಸಾವಿಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ.

ಎಸ್​.ಎನ್​.ಎನ್​.ಆರ್ಟ್ಸ್​ ಅಂಗಡಿ ಮಾಲೀಕ ಅಂಗಡಿ ಮಾಲೀಕ ಪ್ರಶಾಂತ (37) ಮೃತ ದುರ್ದೈವಿ. 15ನೇ ವಾರ್ಡ್​ನ ನಗರಸಭೆ ಸದಸ್ಯ ಅಂಬರೀಷ್​ ಮತ್ತು ಪ್ರಿಯತಮೆ ಸುಮಾ ಆರೋಪಿಗಳು. ತ್ರಿಕೋನ ಪ್ರೇಮದ ಹಿನ್ನೆಲೆಯ ಗಲಾಟೆಯಿಂದ ಬೇಸತ್ತು ಪ್ರಶಾಂತ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದಾಗಿ ಮೃತನ ಸಂಬಂಧಿಕರು ಆರೋಪಿಸಿದ್ದಾರೆ.

ನಗರದ ಎಲ್​ಐಸಿ ಕಚೇರಿ ಮುಂಭಾಗ ಎಸ್​ಎನ್​ಎನ್​ ಆರ್ಟ್ಸ್​ ಅಂಗಡಿ ಇಟ್ಟುಕೊಂಡಿರುವ ಪ್ರಶಾಂತ್​ಗೆ ಕಳೆದ 12 ವರ್ಷಗಳ ಹಿಂದೆ ಶಿಡ್ಲಘಟ್ಟದ ಮಂಗಳಾ ಎಂಬುವರೊಂದಿಗೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕೌಟುಂಬಿಕ ಕಲಹದಿಂದ ದಂಪತಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಇದರ ನಡುವೆ ನಗರದ ನಂದಿ ರಸ್ತೆಯಲ್ಲಿ ಮನೆ ಬಾಡಿಗೆ ಪಡೆದುಕೊಂಡು ವಾಸವಿದ್ದ ಪ್ರಶಾಂತ್​, ಮನೆ ಮಾಲಕಿ ಸುಮಾ ಜತೆಯಲ್ಲಿ ವಾಸವಾಗಿದ್ದರು. ಸುಮಾರ ಪತಿ ತೀರಿಕೊಂಡಿದ್ದಾರೆ. ಹಾಗಾಗಿ ಇವರಿಬ್ಬರೂ ಮದುವೆಯಾಗಲು ಬಯಸಿದ್ದರು. ಹೀಗಿರುವಾಗ ನಗರಸಭೆ ಸದಸ್ಯ ಅಂಬರೀಷ್​, ಸುಮಾ ಜತೆ ಸಲುಗೆ ಬೆಳೆಸಿಕೊಂಡು ಅನ್ಯೋನ್ಯವಾಗಿ ಇದ್ದರು ಎನ್ನಲಾಗಿದೆ. ಇದರಿಂದ ಮೂವರ ನಡುವೆ ಗಲಾಟೆ ನಡೆದಿದ್ದು, ಬೇಸತ್ತು ಪ್ರಶಾಂತ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಾಟ್ಸ್​ ಆ್ಯಪ್​ನಲ್ಲಿ ಡೆತ್​ ನೋಟ್​?: ಸಾವಿಗೂ ಮುನ್ನ ಅಹೋದರಿ ವೀಣಾಗೆ ಕರೆ ಮಾಡಿದ್ದ ಪ್ರಶಾಂತ್​, ಗಲಾಟೆ-ಕಿರುಕುಳದ ಬಗ್ಗೆ ಅಳಲು ತೋಡಿಕೊಂಡು ಆತ್ಮಹತ್ಯೆಗೆ ಶರಣಾಗುವುದಾಗಿ ಹೇಳಿದ್ದಾನೆ. ಇದೇ ವೇಳೆ ಪ್ರಶಾಂತ್​ನನ್ನು ಸಹೋದರಿ ಸಮಾಧಾನ ಮಾಡಿದ್ದರು. ಇದರ ನಡುವೆ ವಾಟ್ಸ್ಆ್ಯಪ್​ ಸ್ಟೇಟಸ್​ನಲ್ಲಿ ''ನನ್ನ ಸಾವಿಗೆ ನಗರಸಭೆ ಸದಸ್ಯ ಅಂಬರೀಷ್​ ಕಾರಣ'' ಎಂಬುದಾಗಿ ಹಾಕಿಕೊಂಡಿದ್ದಾನೆ ಎನ್ನಲಾಗಿದೆ. ಬಳಿಕ ಮನೆಯಲ್ಲಿನ ಫ್ಯಾನ್​ಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಗರ ಪೊಲೀಸ್​ ಠಾಣೆಯಲ್ಲಿ ಅಂಬರೀಷ್​ ಮತ್ತು ಸುಮಾ ವಿರುದ್ಧ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net