ಮದುವೆ ದಿನವೇ ನಾಪತ್ತೆಯಾದ ವಧು! ಅಕ್ಕನ ಬದಲು ತಂಗಿಗೆ ತಾಳಿ ಕಟ್ಟಿದ ವರ!

marriage
Published on

ಭುವನೇಶ್ವರ: ಮದುವೆಗೆ ಭರ್ಜರಿ ಏರ್ಪಾಡಾಗಿತ್ತು. ಇನ್ನೇನು ರಾತ್ರಿಯೆಂದರೆ ಮದುವೆಯಾಗಿ ಆಕೆ ಗಂಡನ ಮನೆ ಸೇರುವವಳಿದ್ದಳು. ಆದರೆ ಮದುವೆಗೆ ಕೆಲವೇ ಗಂಟೆಗಳಿದ್ದಾಗ ವಧು ಮದುವೆ ಮಂಟಪದಿಂದಲೇ ಕಾಣೆಯಾಗಿದ್ದಾಳೆ. ಆಕೆಯಿಂದಾಗಿ ಆಕೆಯ ತಂಗಿಗೂ ಸಂಕಷ್ಟ ಬಂದೊದಗಿದೆ.

ಒಡಿಶಾದ ಕಲಹಂಡಿ ಜಿಲ್ಲೆಯ ಯುವತಿಗೆ ಗುರುವಾರದಂದು 26 ವರ್ಷದ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಅದಾಗಲೇ ಬೇರೆ ಯುವುಕನೊಂದಿಗೆ ಪ್ರೀತಿಯಲ್ಲಿದ್ದ ಯುವತಿ ಮದುವೆ ದಿನದಂದೇ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ. ಇತ್ತ ವಧುವಿನ ಬಗ್ಗೆ ಮಾಹಿತಿಯೇ ಇಲ್ಲದ ವರನ ಕುಟುಂಬ ಮದುವೆಗೆಂದು ದಿಬ್ಬಣ ತೆಗೆದುಕೊಂಡು ಬಂದಿದೆ. ಸಮಾಜದೆದುರು ಮಾನ ಉಳಿಸಿಕೊಳ್ಳುವ ಸಲುವಾಗಿ ಎರಡು ಕುಟುಂಬಗಳು ಸೇರಿ ಒಂದು ನಿರ್ಧಾರ ಮಾಡಿವೆ. ಓಡಿ ಹೋದ ವಧುವಿನ 15 ವರ್ಷದ ತಂಗಿಯೊಂದಿಗೆ ವರನಿಗೆ ಮದುವೆ ಮಾಡಲು ನಿಶ್ಚಯಿಸಲಾಗಿದೆ.

ಇನ್ನೂ ಎಸ್​ಎಸ್​ಎಲ್​ಸಿ ಓದುತ್ತಿದ್ದ ಬಾಲಕಿಗೆ 26 ವರ್ಷದವನ ಜತೆ ಮದುವೆಯನ್ನೂ& ಮಾಡಲಾಗಿದೆ. ಆದರೆ ಇಷ್ಟೊತ್ತಿಗಾಗಲೇ ಈ ವಿಚಾರ ಪೊಲೀಸರಿಗೆ ತಲುಪಿದ್ದು, ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಆಗ 18 ವರ್ಷದೊಳಗೆ ಮದುವೆ ಮಾಡುವುದು ಕಾನೂನುಬಾಹಿರ ಎಂದು ತನಗೆ ತಿಳಿದಿರಲಿಲ್ಲವೆಂದು ಇಬ್ಬರ ಕುಟುಂಬ ಪೊಲೀಸರೆದುರು ತಪ್ಪೊಪ್ಪಿಕೊಂಡಿದೆ.

ಈ ವಿಚಾರದಲ್ಲಿ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ. ಇಬ್ಬರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಬಾಲಕಿ ವಯಸ್ಕಳಾಗುವವರೆಗೂ ಆಕೆಯನ್ನು ಮದುವೆ ಆದವಳಂತೆ ಪರಿಗಣಿಸದಿರಲು ಎರಡು ಕುಟುಂಬಗಳು ನಿರ್ಧರಿಸಿವೆ. ಬಾಲಕಿಯನ್ನು ಪೋಷಕರೊಂದಿಗೆ ವಾಸಿಸಲು ಬಿಟ್ಟಿದ್ದು, ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಸಿದ್ಧತೆ ನಡೆಸಿಕೊಳ್ಳಲು ತಿಳಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net