

ಮೃತ್ಯುಂಜಯ ಕಪಗಲ್ ಬೆಂಗಳೂರು
ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಕೃಷಿ ಕ್ಷೇತ್ರದ ಉತ್ಪಾದಕ ಸಾಮರ್ಥ್ಯ ಹೆಚ್ಚಿಸಲು ನೀರಾವರಿ ಸೌಲಭ್ಯ ಸೃಜನೆ ಹಾಗೂ ಗ್ರಾಮೀಣ ಮೂಲ ಸೌಕರ್ಯ ಸುಧಾರಣೆಗಳೂ ಸೇರಿದ್ದು, ಇವೆರಡರಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸುವಲ್ಲಿ ರಾಜ್ಯ ಸರ್ಕಾರ ಮುಗ್ಗರಿಸಿದೆ.
ಕಳೆದ ನಾಲ್ಕೂವರೆ ತಿಂಗಳ ಇಲಾಖಾವಾರು ಆರ್ಥಿಕ ಪ್ರಗತಿಯು ಮಂದಗತಿ ಸಾಧನೆಗೆ ಕೈಗನ್ನಡಿ ಹಿಡಿದಿದ್ದು, ಇನ್ನು ಆರು ತಿಂಗಳಲ್ಲಿ ಬೆಟ್ಟದಷ್ಟು ನಿರೀಕ್ಷೆಗಳಿಗೆ ಸ್ಪಂದಿಸುವ ಸವಾಲು ಸರ್ಕಾರದ ಮುಂದಿದೆ. ಸಾರ್ವತ್ರಿಕ ಮೂಲ ಆದಾಯದ ಪರಿಕಲ್ಪನೆಯ ಗ್ಯಾರಂಟಿ ಯೋಜನೆಗಳು ದುರ್ಬಲರು, ಬಡವರು, ಮಹಿಳೆಯರಿಗೆ ಆರ್ಥಿಕ ಸಂಪನ್ಮೂಲಗಳ ಸಮಾನ ಹಂಚಿಕೆಗೆ ಅವಕಾಶ ಕೊಡುತ್ತವೆ. ಆದರೆ, ಗ್ಯಾರಂಟಿಗಳಿಗೆ ಹಣಕಾಸಿನ ಬಲ ನೀಡಲು ಶಕ್ತವಾದ ಯೋಜನೆಗಳು ತೆವಳುತ್ತಿವೆ. ಪ್ರಸಕ್ತ ಆರ್ಥಿಕ ವರ್ಷದ ಪ್ರಕಾರ 2023-24ರ ಬಜೆಟ್ ಅರ್ಧ ವರ್ಷ ಕಳೆದಿದೆ. ಆದರೆ ಸಿಎಂ ಸಿದ್ದರಾಮಯ್ಯ ಜುಲೈನಲ್ಲಿ 2023-24ರ ಪರಿಷ್ಕೃತ ಬಜೆಟ್ ಮಂಡಿಸಿದ್ದು, 2024ರ ಮಾರ್ಚ್ಗೆ 31ಕ್ಕೆ ಅಂತ್ಯಗೊಳ್ಳುತ್ತದೆ.
ಒಟ್ಟಾರೆ ಶೇ.31.43 ಸಾಧನೆ: ಕರ್ನಾಟಕ ಪ್ರಗತಿ ಪರಿಶೀಲನೆ ವರದಿ ಪ್ರಕಾರ ಪ್ರಸ್ತುತ ಬಜೆಟ್ನಲ್ಲಿ ಅನುದಾನ ಹಂಚಿಕೆ, ಬಿಡುಗಡೆ ಹಾಗೂ ಬಳಕೆ ಒಳಗೊಂಡು ಒಟ್ಟಾರೆ ಶೇ.31.43 ಸಾಧನೆ ಸಾಧ್ಯವಾಗಿದೆ. ಅಭಿವೃದ್ಧಿ ಜವಾಬ್ದಾರಿ ಹೊತ್ತ ಎಲ್ಲ ಇಲಾಖೆಗಳಿಗೆ ಈ ಬಾರಿ ಒಟ್ಟು 2,96,853.63 ಕೋಟಿ ರೂ. ಹಂಚಿಕೆಯಾಗಿದೆ. ಈ ಪೈಕಿ ಸೆಪ್ಟೆಂಬರ್ವರೆಗೆ 1,11,854.48 ಕೋಟಿ ರೂ. ಬಿಡುಗಡೆಯಾಗಿದ್ದರೆ, 93,304.81 ಕೋಟಿ ರೂ. ವಿನಿಯೋಗವಾಗಿದೆ. ಆರ್ಥಿಕ, ತಾಂತ್ರಿಕ, ಆಡಳಿತಾತ್ಮಕ ಕಾರಣ ಗಳಿಗೆ ವೇಗ ತಗ್ಗಿಸಬೇಕೆಂಬ ಪರೋಕ್ಷ ಸೂಚನೆಗಳು ಪ್ರಮುಖ ಇಲಾಖೆಗಳಿಗೆ ರವಾನೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಜಲ ಸಂಪನ್ಮೂಲ, ಮೂಲಭೂತ ಸೌಕರ್ಯ, ಆರ್ಡಿಪಿಆರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಆರ್ಥಿಕ ಪ್ರಗತಿ ಶೇ.15 ರಿಂದ 20ಕ್ಕೆ ಸೀಮಿತ ಎಂಬುದು ಗಮನಾರ್ಹ. ಕೃಷಿ, ಸಹಕಾರ, ತೋಟಗಾರಿಕೆ, ಅಲ್ಪಸಂಖ್ಯಾತರ ಕಲ್ಯಾಣ, ಯುವ ಸಬಲೀಕರಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಹಿಂದುಳಿದ ವರ್ಗಗಳ ಇಲಾಖೆಗಳ ವೆಚ್ಚ ಹೇಳಿಕೊಳ್ಳುವಂತಿಲ್ಲ.
ಸ್ವಲ್ಪಮಟ್ಟಿಗೆ ಸಮಾಧಾನ: ಶಿಕ್ಷಣ, ಸಮಾಜ ಕಲ್ಯಾಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಣ್ಣ ನೀರಾವರಿ ಮತ್ತು ಇಂಧನ ಇಲಾಖೆಗಳು ಆರ್ಥಿಕ ಪ್ರಗತಿ ಶೇ.35 ರಿಂದ 43 ಇರುವುದು ಸಮಾಧಾನಕರ ಸಂಗತಿ. ಒಟ್ಟಾರೆ ಬಜೆಟ್ ವೆಚ್ಚವು ಶೇ.31.43 ಆಗಿದ್ದರೆ, ಕಳೆದ ವರ್ಷ ಇದೇ ಅವಧಿಗೆ ಶೇ.27 ಇತ್ತು. ಈ ತುಲನಾತ್ಮಕ ಅಂಕಿ-ಅಂಶಗಳನ್ನು ಮುಂದಿಟ್ಟು ಸರ್ಕಾರ ಮುಂದಿದೆ ಎಂದು ಆರ್ಥಿಕ ಇಲಾಖೆ ಸಮರ್ಥನೆ ನೀಡುತ್ತಿದೆ. ಆದರೆ ಗ್ಯಾರಂಟಿ ಯೋಜನೆಗಳಿಗೆ ಮಾಡಿದ ವೆಚ್ಚವೂ ಇದರಲ್ಲೇ ಅಡಕವಾಗಿದೆ. ಯೋಜನೆವಾರು ಹಂಚಿಕೆಯಾದ ಹಣದಲ್ಲಿ ವಿನಿಯೋಗ, ಬಂಡವಾಳ ವೆಚ್ಚವೇ ಅಭಿವೃದ್ಧಿಗೆ ಮಾನದಂಡವಾಗಿದೆ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ.
ಮೂಲಭೂತ ಸೌಲಭ್ಯ ಮತ್ತು ಒಳನಾಡು ಜಲಸಾರಿಗೆಗೆ 1048.47 ಕೋಟಿ ರೂ. ಹಂಚಿಕೆ, 306 ಕೋಟಿ ರೂ. ಬಿಡುಗಡೆ, ಸೆಪ್ಟೆಂಬರ್ವರೆಗೆ 70 ಕೋಟಿ ರೂ. ಬಳಕೆಯಾಗಿದೆ. ಸಹಕಾರ ಇಲಾಖೆಗೆ 2,276 ಕೋಟಿ ರೂ. ಹಂಚಿಕೆಯಾಗಿದ್ದು, 850.66 ಕೋಟಿ ರೂ. ಬಿಡುಗಡೆಯಾಗಿದೆ. 509 ಕೋಟಿ ರೂ. ವೆಚ್ಚವಾಗಿದೆ. ಕೃಷಿಗೆ 4,120 ಕೋಟಿ ರೂ. ಹಂಚಿಕೆಯಾಗಿದ್ದು, 1,651 ಕೋಟಿ ರೂ. ಬಿಡುಗಡೆ ಮಾಡಿದ್ದರಲ್ಲಿ 1,016 ಕೋ.ರೂ. (ಶೇ.22) ವಿನಿಯೋಗವಾಗಿದೆ.
ಸಮಾಜ ಕಲ್ಯಾಣ ಇಲಾಖೆಗೆ ಹಂಚಿಕೆಯಾದ ಅನುದಾನ 4,433 ಕೋಟಿ ರೂ., ಬಿಡುಗಡೆ 2,419 ಕೋಟಿ ರೂ., ವೆಚ್ಚ 1,893 ಕೋಟಿ ರೂ.ಗಳಾಗಿದೆ. ಶಿಕ್ಷಣ ಇಲಾಖೆಗೆ 32,374 ಕೋಟಿ ರೂ. ಅನುದಾನ ಹಂಚಿದ್ದರೆ 16,460 ಕೋಟಿ ರೂ. ಬಿಡುಗಡೆಯಾಗಿದೆ, 12,570 ಕೋಟಿ ರೂ. ವ್ಯಯಿಸಲಾಗಿದೆ. ಆರೋಗ್ಯ ಇಲಾಖೆಗೆ 11,337 ಕೋಟಿ ರೂ. ಹಂಚಿಕೆ ಮಾಡಿದ್ದು, ಬಿಡುಗಡೆಯಾಗಿದ್ದ 4,184 ಕೋಟಿ ರೂ.ಗಳಲ್ಲಿ 4,007 ಕೋಟಿ ರೂ. ವಿನಿಯೋಗವಾಗಿದೆ ಎಂದು ಅಧಿಕೃತ ಅಂಕಿ-ಅಂಶಗಳು ತಿಳಿಸಿವೆ. ಅಭಿವೃದ್ಧಿ ಹಿನ್ನಡೆಗೆ ತಜ್ಞರ ಆತಂಕ: ಲೋಕೋಪಯೋಗಿ, ಜಲಸಂಪನ್ಮೂಲ, ಕೃಷಿ ಮುಂತಾದ ಕ್ಷೇತ್ರಗಳ ದೂರಗಾಮಿ ಪ್ರಯೋಜನ ನೀಡುವಂತಹ ಯೋಜನೆಗಳಿಗೆ ಮೀಸಲಿಟ್ಟಿರುವ ಹಣ ಕಡಿಮೆ ಎಂಬ ಅಪಸ್ವರವಿದೆ.ಇದು, ಸಾಲದೆಂಬಂತೆ ಆರ್ಥಿಕ ಪ್ರಗತಿಯಲ್ಲಿ ಹಿಂದೆ ಬಿದ್ದರೆ ರಾಜ್ಯದ ಒಟ್ಟಾರೆ ಅಭಿವೃದ್ಧಿಗೆ ಹಿನ್ನಡೆ ಉಂಟಾಗಲಿದೆ ಎನ್ನುವುದು ತಜ್ಞರ ಆತಂಕವಾಗಿದೆ.
ಲೋಕೋಪಯೋಗಿ ಇಲಾಖೆಗೆ 9,645 ಕೋಟಿ ರೂ. ಹಂಚಿಕೆ, 3,174 ಕೋಟಿ ರೂ. ಬಿಡುಗಡೆ ಮಾಡಿದ್ದು, 2,617 ಕೋಟಿ ರೂ. ವೆಚ್ಚವಾಗಿದೆ. ಹಾಗೆಯೇ ಜಲ ಸಂಪನ್ಮೂಲ ಇಲಾಖೆಗೆ 18,013 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಸೆಪ್ಟೆಂಬರ್ವರೆಗೆ ಬಿಡುಗಡೆಯಾದ 4,507 ಕೋಟಿ ರೂ.ಗಳಿಗೆ ಎದುರಾಗಿ 4,817 ಕೋಟಿ ರೂ. ವೆಚ್ಚವಾಗಿದೆ. ಎರಡೂ ಇಲಾಖೆಗಳ ಬಾಕಿ ಕಾಮಗಾರಿ ಮೊತ್ತವೇ 20 ಸಾವಿರ ಕೋಟಿ ರೂ.ಗಳಷ್ಟಿದೆ. ಚಾಲ್ತಿ ಕಾಮಗಾರಿ ಪೂರ್ಣಗೊಳಿಸಲು ದುಪ್ಪಟ್ಟು ಮೊತ್ತ ಬೇಕಾಗಿದೆ.ಕೃಷ್ಣಾ ಎರಡನೇ ನ್ಯಾಯಾಧಿಕರಣ ರಾಜ್ಯಕ್ಕೆ ಹಂಚಿಕೆ ಮಾಡಿದ ನೀರಿನ ಬಳಕೆ ಉದ್ದೇಶಿತ ಯೋಜನೆಗಳಿಗೆ 1.25 ಲಕ್ಷ ಕೋಟಿ ರೂ., ಕಳಸಾಬಂಡೂರಿ, ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತರಬೇಕಾದ ಒತ್ತಡವಿದೆ. ಕೃಷ್ಣಾ ಎರಡನೇ ನ್ಯಾಯಾಧಿಕರಣದ ಐತೀರ್ಪಿನ ಅಧಿಸೂಚನೆ ಪ್ರಕಟವಾಗುತ್ತಿದ್ದಂತೆ ಉದ್ದೇಶಿತ ಕಾಮಗಾರಿಗಳಿಗೆ ಚಾಲನೆ ನೀಡಬೇಕಾಗಿದೆ. ನಮ್ಮ ಪಾಲಿನ ನೀರು ಬಳಸಿಕೊಳ್ಳದಿದ್ದರೆ ಭವಿಷ್ಯದಲ್ಲಿ ದೊಡ್ಡ ಅಪಾಯ ಎದುರಿಸಬೇಕಾಗುತ್ತದೆ ಎಂದು ನೀರಾವರಿ ತಜ್ಞರು ಎಚ್ಚರಿಸಿದ್ದಾರೆ. ಲೋಪ-ದೋಷ ದೂರುಗಳ ಪರಾಮರ್ಶೆ, ಟೆಂಡರ್ಗಳ ಪರಿಶೀಲನೆ ಹೆಸರಿನಲ್ಲಿ ಕಡತಗಳೆಲ್ಲ ಕೇಂದ್ರ ಕಚೇರಿಗೆ ರವಾನೆಯಾಗಿದ್ದು, ಯುಕೆಪಿ ಪ್ರಮುಖ ಯೋಜನೆಗಳು ಸ್ಥಗಿತ ಸ್ಥಿತಿಯಲ್ಲಿವೆ ಎಂದು ಮೂಲಗಳು ಮಾಹಿತಿ ನೀಡಿವೆ.
ಪರಿಣತರು ಗುರುತಿಸಿದಂತೆ ಸರ್ಕಾರದ ಸಂಕಟಗಳು
ನಾಲ್ಕು ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಸಿಂಹಪಾಲು ಅನುದಾನ ಒದಗಿಸಿದೆ. ಈ ನಡುವೆ ಬರ ಸೃಷ್ಟಿಸಿರುವ ಹೆಚ್ಚುವರಿ ವೆಚ್ಚ ಸರಿದೂಗಿಸಬೇಕಾದ ಸವಾಲು ಇದೆ. ಅಭಿವೃದ್ಧಿಯಲ್ಲಿ ಸರ್ಕಾರ ತೊಂದರೆಗೆ ಸಿಲುಕಿದರೂ ಅಂತಿಮವಾಗಿ ಜನರೇ ಬಾಧಿತರು.
| ಪ್ರೊ.ಬಿ.ಎಂ.ಕುಮಾರಸ್ವಾಮಿ ಆರ್ಥಿಕ ತಜ್ಞ