'ಬಿಲ್ಲವಾಸ್ ಕತಾರ್'ನಿಂದ ರಕ್ತದಾನ ಅಭಿಯಾನ: ಮಾನವೀಯತೆ ಮರೆದ 100ಕ್ಕೂ ಹೆಚ್ಚು ದಾನಿಗಳು

Blood donation Billawas Qatar
Published on

ದೋಹಾ: ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಹವರ್ತಿ ಸಂಸ್ಥೆ 'ಬಿಲ್ಲವಾಸ್ ಕತಾರ್' ವತಿಯಿಂದ ಹಮಾದ್ ವೈದ್ಯಕೀಯ ನಿಗಮದ(ಎಚ್‌ಎಂಸಿ) ಸಹಯೋಗದೊಂದಿಗೆ ಇತ್ತೀಚಿಗೆ ರಕ್ತದಾನ ಅಭಿಯಾನ ನಡೆಯಿತು.

ಹಮಾದ್ ವೈದ್ಯಕೀಯ ನಿಗಮದಲ್ಲಿ ಏ.8ರಂದು ಆಯೋಜಿಸಿದ್ದ ಶಿಬಿರದಲ್ಲಿ 100ಕ್ಕೂ ಹೆಚ್ಚು ದಾನಿಗಳು ಸ್ವಯಂಪ್ರೇರಿತವಾಗಿ ರಕ್ತದಾನಕ್ಕೆ ಹೆಸರು ನೋಂದಾಯಿಸಿಕೊಂಡು ರಕ್ತದಾನ ಮಾಡಿ ಮಾನವೀಯತೆ ಮರೆದರು.

ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ರಘುನಾಥ ಅಂಚನ್, ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ರಕ್ತದ ಅವಶ್ಯಕತೆ ಇರುವವರಿಗೆ ನೆರವಾಗುವುದು ನಮ್ಮ ಸಂಸ್ಥೆಯ ಮುಖ್ಯಧ್ಯೇಯ. ರಕ್ತದಾನದಂತಹ ಉದಾತ್ತ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದರು.

ಮುಖ್ಯ ಅತಿಥಿಗಳಾಗಿ ಐಸಿಸಿ ಕತಾರ್ ಅಧ್ಯಕ್ಷ ಪಿ.ಎನ್.ಬಾಬು ರಾಜನ್, ಐಸಿಸಿ ಕತಾರ್ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು, ಐಸಿಬಿಎಫ್ ಕತಾರ್ ಉಪಾಧ್ಯಕ್ಷ ವಿನೋದ್ ವಿ. ನಾಯರ್ ಉಪಸ್ಥಿತರಿದ್ದರು. ಸಾವಿನ ದವಡೆಯಲ್ಲಿರುವವರ ಪ್ರಾಣ ಉಳಿಸುವ ಮಹತ್ತರ ಕಾರ್ಯಕ್ರಮ ಆಯೋಜಿಸಿದ ಸಂಘಟಕರನ್ನು ಶಾಘಿಸಿದ ಮುಖ್ಯಅತಿಥಿಗಳು, ಇಂತಹ ಸಮಾಜಮುಖಿ ಕಾರ್ಯಗಳಿಗೆ ನಮ್ಮ ಪ್ರೋತ್ಸಾಹ ಸದಾ ಇರಲಿದೆ. ಬಿಲ್ಲವಾಸ್ ಕತಾರ್​ನ ಕಾರ್ಯ ಸಮಾಜ ಸೇವೆಗೆ ಹಿಡಿದ ಕೈಗನ್ನಡಿ ಎಂದು ಕೊಂಡಾಡಿದರು.

ರಕ್ತದಾನದ ಮಹತ್ವ ಮತ್ತು ದಾನಿಗಳಿಗೆ ಅದರಿಂದಾಗುವ ಪ್ರಯೋಜನ ಕುರಿತು ಡಾ.ಸಂಪತ್ ಸುಂದರ್ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸಂದೀಪ್ ಮಲ್ಲಾರ್ ಅವರು ವಂದನಾರ್ಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net