

ಮಂಡ್ಯ: ರಾಹುಲ್ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಮಂಡ್ಯ ಜಿಲ್ಲೆಯನ್ನು ಪ್ರವೇಶಿಸಿದ್ದು, ಜಿಲ್ಲಾ ಕಾಂಗ್ರೆಸ್ ನಾಯಕರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಮೈಸೂರಿನಿಂದ ಸೋಮವಾರ ಬೆಳಗ್ಗೆ 6.30ಕ್ಕೆ ಹೊರ ಯಾತ್ರೆಯು ಲಕ್ಷ್ಮೀಪುರ ಗ್ರಾಮದ ಮೂಲಕ ಬೆಳಗ್ಗೆ 9 ಗಂಟೆಗೆ ಮಂಡ್ಯ ಜಿಲ್ಲೆಯನ್ನ ಪ್ರವೇಶಿಸಿತು.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿ ಗೇಟ್ ಬಳಿ ಸೇರಿದ್ದ ಸಾವಿರಾರು ಜನರು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ರಾಹುಲ್ಗಾಂಧಿ ಅವರನ್ನ ಸ್ವಾಗತಿಸಿ, ಅವರೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ. ವಿವಿಧ ಜಾನಪದ ಕಲಾ ತಂಡಗಳ ಮೆರುಗು, ಕಾರ್ಯಕರ್ತರ ರಣ ಉತ್ಸಾಹದೊಂದಿಗೆ ಯಾತ್ರೆ ನಡೆಯುತ್ತಿದೆ.
ಇಂದು ಮಧ್ಯಾಹ್ನ 12ಕ್ಕೆ ವಿಶೇಷ ವಿಮಾನದ ಮೂಲಕ ಮೈಸೂರು ವಿಮಾನ ನಿಲ್ದಾಣಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯೊಂದಿಗೆ ಕಾಂಗ್ರೆಸ್ನ ಅಧಿನಾಯಕಿ ಸೋನಿಯಾ ಗಾಂಧಿ ಆಗಮಿಸಲಿದ್ದಾರೆ. ದಸರಾ ಅಂಗವಾಗಿ ಪಾದಯಾತ್ರೆಗೆ ಸೆ.4 ಮತ್ತು 5ರಂದು ವಿರಾಮ ನೀಡಿರುವುದರಿಂದ ಸೋನಿಯಾ ಅವರೊಂದಿಗೆ ರಾಹುಲ್ ಕೂಡ ಕೊಡಗು ಜಿಲ್ಲೆಗೆ ತೆರಳಿ ಖಾಸಗಿ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿ ವಿಶ್ರಾಂತಿ ಪಡೆಯಲಿದ್ದಾರೆ. ಸೆ. 6ರಂದು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಮರುಚಾಲನೆ ದೊರೆಯುವ ಯಾತ್ರೆಯಲ್ಲಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ರಾಹುಲ್ ಜತೆ ಹೆಜ್ಜೆ ಹಾಕಲಿದ್ದಾರೆ.