ಒಡೆದ ಮನಸ್ಸುಗಳ ಬೆಸುಗೆಗೆ ಸಾಕ್ಷಿ ಆದ ಬದನವಾಳು: ಭಾರತ್ ಜೋಡೋ ಯಾತ್ರೆಯಲ್ಲಿ ವಿಶೇಷ ಸಂದರ್ಭ

Rahul Gandhi
Published on

| ಮಂಜುನಾಥ ಟಿ. ಭೋವಿ ಮೈಸೂರು

ಜಾತಿ ಸಂಘರ್ಷ ಕಾರಣಕ್ಕೆ ಬದನವಾಳು ಗ್ರಾಮದಲ್ಲಿ ಒಡೆದು ಹೋಗಿದ್ದ ಮನಸ್ಸುಗಳಿಗೆ ಮೂರು ದಶಕದ ಬಳಿಕ ಬೆಸುಗೆ ಹಾಕಿದ ಅಪರೂಪದ ಸಂದರ್ಭಕ್ಕೆ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಸಾಕ್ಷಿಯಾಯಿತು!

1993ರಲ್ಲಿ ನಡೆದ ಜಾತಿ ಸಂಘರ್ಷದ ಕಹಿ ಘಟನೆಯಿಂದ ಕದಡಿದ್ದ ಬದನವಾಳು ಗ್ರಾಮದ ದಲಿತ ಮತ್ತು ಸವರ್ಣೀಯರ ಮನಸ್ಸಗಳನ್ನು ಮತ್ತೆ ಜೋಡಿಸುವ ಕೆಲಸವನ್ನು ರಾಹುಲ್ ಗಾಂಧಿ ಭಾನುವಾರ ಮಾಡಿದರು. ಕೋಮುಗಲಭೆಯಿಂದ ಎರಡೂ ಸಮುದಾಯದ ಓಣಿಗಳ ನಡá-ವೆ ಸಂಪರ್ಕ ಇಲ್ಲವಾಗಿತ್ತು. ಹೀಗಾಗಿ ಇಲ್ಲಿ ಹೊಸದಾಗಿ ರಸ್ತೆ ನಿರ್ವಿುಸಿ, ಅದಕ್ಕೆ ‘ಭಾರತ ಜೋಡೋ ರಸ್ತೆ’ ಎಂದು ನಾಮಕರಣ ಮಾಡಲಾಯಿತು. ಮೊದಲ ಬಾರಿಗೆ ದಲಿತ ಹಾಗೂ ಲಿಂಗಾಯತ ಸಮುದಾಯದವರು ಒಟ್ಟಿಗೆ ಕುಳಿತು ಸಹಪಂಕ್ತಿ ಭೋಜನ ಮಾಡಿದ್ದು, ವೈಷಮ್ಯ ಮರೆಸಿ ಭಾತೃತ್ವ, ಸೋದರತೆ ಬೆಸೆಯಲು ನಾಂದಿ ಹಾಡಿತು. ಎರಡೂ ಸಮುದಾಯದ ಮುಖಂಡರು, ಗ್ರಾಮಸ್ಥರೊಂದಿಗೆ ಯಾತ್ರೆಯಲ್ಲಿ ಹೆಜ್ಜೆ ಹಾಕಿ ಹೊಸ ಭರವಸೆ ಮೂಡಿಸಿದರು. ನಂಜನಗೂಡು ತಾಲೂಕಿನ ತಾಂಡವಪುರದಲ್ಲಿ ಶನಿವಾರ ರಾತ್ರಿ ವಾಸ್ತವ್ಯ ಹೂಡಿದ್ದ ರಾಹುಲ್​ಗಾಂಧಿ, ಭಾನುವಾರ ಬೆಳಗ್ಗೆ ಚರಕ ಸಂಸ್ಕೃತಿ ನೆಲೆಯೂರಿರುವ ಬದನವಾಳು ಗ್ರಾಮದ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಗಾಂಧಿ ಜಯಂತಿ ಆಚರಿಸಿದರು.

ಸಂಗೀತ ಲೀಲೆಯಲ್ಲಿ ಧ್ಯಾನಸ್ಥ: ಕಾಲ್ನಡಿಗೆ ಯಾತ್ರೆಯನ್ನು ಮೊಟಕುಗೊಳಿಸಿದ ರಾಹುಲ್ ಗ್ರಾಮದಲ್ಲಿ ಅರ್ಧ ದಿನ ಕಳೆದರು. ಗಾಯಕಿ ಸಂಗೀತಾ ಕಟ್ಟಿ ಅವರ ಭಜನಾ ಸಂಗೀತದ ಲೀಲೆಯಲ್ಲಿ ತೇಲಿದ ಅವರು, ತದನಂತರ ಕೈಮಗ್ಗದಲ್ಲಿ ನೂಲನ್ನು ಬಳಸಿಕೊಂಡು ಬಟ್ಟೆ ನೇಯುವ ಕೆಲಸವನ್ನು ತದೇಕಚಿತ್ತದಿಂದ ವೀಕ್ಷಿಸಿದರು. ನಂತರ ಅಲ್ಲಿನ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಆರು ತಿಂಗಳಿಂದ ಕೆಲಸ ಇಲ್ಲ. ಜೀವನ ನಡೆಸುವುದೇ ದುಸ್ತರವಾಗಿದೆ. ಸಂಬಂಧಿಸಿದವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಕೇಂದ್ರದ ಮಹಿಳಾ ಸಿಬ್ಬಂದಿ ಸಮಸ್ಯೆಯನ್ನು ಬಿಚ್ಚಿಟ್ಟರು. ನಮಗೆ ಕೂಡಲೇ ಕೆಲಸ ಕೊಡಿಸಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್, ಇನ್ನು ಆರು ತಿಂಗಳು ತಾಳ್ಮೆಯಿಂದ ಇರಿ. ನಮ್ಮದೇ ಸರ್ಕಾರ ಬರುತ್ತದೆ. ಮಾರುಕಟ್ಟೆ ದರಕ್ಕೆ ಅನುಗುಣವಾಗಿ ವೇತನ ಸಿಗುವಂತೆ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು. ಇದಕ್ಕೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ದನಿಗೂಡಿಸಿದರು.

ಬಣ್ಣ ಬಳಿದ ರಾಹುಲ್: ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್​ಗೆ ರಾಹುಲ್ ಬಣ್ಣ ಬಳಿದು ಕೈಬೆರಳಚ್ಚಿನ ಲೇಪನ ಮಾಡಿದರು. ವಿದ್ಯಾರ್ಥಿಗಳೊಂದಿಗೆ ಹೆಜ್ಜೆ ಹಾಕಿದ ರಾಹುಲ್ ಅವರನ್ನು ನೋಡಲು ಗ್ರಾಮಸ್ಥರು ಮುಗಿಬಿದ್ದರು. ಖಾದಿ ಕೇಂದ್ರದ ಆವರಣದಲ್ಲಿ ವಿವಿಧ ಜಾತಿಯ 200 ಗಿಡ ನೆಡುವ ಅಭಿಯಾನಕ್ಕೆ ಚಾಲನೆ ಕೊಟ್ಟರು.

ದೇವರ ದರ್ಶನ: ಬದನವಾಳು ಗ್ರಾಮದಿಂದ ಸಂಜೆ 3.45ರ ಸುಮಾರಿಗೆ ನಂಜನಗೂಡಿನ ಶ್ರೀಕಂಠೇಶ್ವರ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು. ಶ್ರೀಕಂಠೇಶ್ವರನ ದರ್ಶನ ಮುಗಿಸಿಕೊಂಡು ಹೊರಟ ಅವರು, ಮೈಸೂರು ತಾಲೂಕು ಪ್ರವೇಶಿಸಿ, ಕಡಕೊಳ ಗ್ರಾಮದಿಂದ ಸಂಜೆ 4ರ ಹೊತ್ತಿಗೆ ಪಾದಯಾತ್ರೆ ಆರಂಭಿಸಿದರು. ವಿವಿಧ ಜಾನಪದ ಕಲಾ ತಂಡಗಳ ಮೆರುಗು, ಕಾರ್ಯಕರ್ತರ ರಣ ಉತ್ಸಾಹದೊಂದಿಗೆ ಯಾತ್ರೆ ಮೈಸೂರು ಹೊರವಲಯ ಬಂಡಿಪಾಳ್ಯದಲ್ಲಿ ದಿನಾಂತ್ಯಗೊಂಡಿತು. ಮೈಸೂರಿನಲ್ಲಿ ರಾಹುಲ್ ವಾಸ್ತವ್ಯ ಹೂಡಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಂದೀಪ್​ಸಿಂಗ್ ಸುರ್ಜೆವಾಲಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ ಹಲವಾರು ಮುಖಂಡರು ದಿನವಿಡೀ ರಾಹುಲ್ ಅವರಿಗೆ ಜತೆಯಾದರು.

ಬಿಜೆಪಿ ಕಪ್ಪುಪಟ್ಟಿ ತೋರಿದರೆ ತಕ್ಕ ಉತ್ತರ: ಮೈಸೂರಿನಲ್ಲಿ ಯಾತ್ರೆ ಸಾಗುವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಕಪ್ಪುಬಾವುಟ ಪ್ರದರ್ಶಿಸಿದರೆ, ಅದಕ್ಕೆ ತಕ್ಕ ಉತ್ತರ ನೀಡುವುದು ನಿಶ್ಚಿತ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಡುಗಿದರು. ಈ ಕುರಿತು ಮಾಹಿತಿ ಬಂದಿದೆ. ಪೊಲೀಸರು ಮುನ್ನೆಚ್ಚರಿಕೆ ವಹಿಸಬೇಕು. ಇಷ್ಟರ ಮೇಲೆಯೂ ಬಿಜೆಪಿಯವರು ಕಪ್ಪುಪಟ್ಟಿ, ಕಪ್ಪುಬಾವುಟ ತೋರಿಸಲಿ, ಮೊಟ್ಟೆಯಾದರೂ ಹೊಡೆಯಲಿ. ಅದಕ್ಕೆ ಹೆದರಲ್ಲ ಎಂದು ಎಚ್ಚರಿಸಿದರು.

ಸೋನಿಯಾ, ಪ್ರಿಯಾಂಕಾ ಆಗಮನ ನಿರೀಕ್ಷೆ: ಪಾದಯಾತ್ರೆ ಕೈಗೊಂಡಿರುವ ರಾಹುಲ್ ಗಾಂಧಿ ಅವರಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆಯಾಗುವ ಸಾಧ್ಯತೆ ಇದೆ. ವಿಶೇಷ ವಿಮಾನದ ಮೂಲಕ ಮೈಸೂರು ವಿಮಾನ ನಿಲ್ದಾಣಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯೊಂದಿಗೆ ಸೋನಿಯಾ ಸೆ. 3ರಂದು ಆಗಮಿಸá-ವ ನಿರೀಕ್ಷೆ ಇದೆ. ದಸರಾ ಅಂಗವಾಗಿ ಪಾದಯಾತ್ರೆಗೆ ಸೆ.4 ಮತ್ತು 5ರಂದು ವಿರಾಮ ನೀಡಿರುವುದರಿಂದ ಸೋನಿಯಾ ಅವರೊಂದಿಗೆ ರಾಹುಲ್ ಕೂಡ ಕೊಡಗು ಜಿಲ್ಲೆಗೆ ತೆರಳಿ ಖಾಸಗಿ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿ ವಿಶ್ರಾಂತಿ ಪಡೆಯಲಿದ್ದಾರೆ ಎಂಬ ಮಾಹಿತಿ ಇದೆ. ಸೆ. 6ರಂದು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಮರುಚಾಲನೆ ದೊರೆಯುವ ಯಾತ್ರೆಯಲ್ಲಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ರಾಹುಲ್ ಜತೆ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿದೆ. ಇದೇ ದಿನ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಆಗಮನವೂ ಖಚಿತವಾಗಿದೆ. ಈ ಪ್ರವಾಸ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ.

7ರಂದು ವಿಚಾರಣೆಗೆ ವಿನಾಯಿತಿ ಕೋರಿರುವೆ: ಯಂಗ್ ಇಂಡಿಯಾ ಹಾಗೂ ನ್ಯಾಷನಲ್ ಹೆರಾಲ್ಡ್ ಪ್ರಕರಣ ವಿಚಾರವಾಗಿ ನನಗೆ ಅ.7ರಂದು ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಕಿರುಕುಳ ನೀಡಿದ ನಂತರ ನನ್ನನ್ನು ವಿಚಾರಣೆಗೆ ಕರೆದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದರು. ನನ್ನ ಮೇಲೆ ಬೇರೆ ಪ್ರಕರಣಗಳ ಜತೆಗೆ ಇದನ್ನೂ ಸೇರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲೂ ಭಾರತ ಜೋಡೋ ಯಾತ್ರೆ ಸಮಯದಲ್ಲಿ ನನಗೆ ಹಾಗೂ ನನ್ನ ಸಹೋದರನಿಗೆ ನೋಟಿಸ್ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅ. 7ರಂದು ರಾಹುಲ್ ಗಾಂಧಿ ಆದಿಚುಂಚನಗಿರಿ ಮಠಕ್ಕೆ ತೆರಳಿ ಸ್ವಾಮೀಜಿ ಅವರನ್ನು ಭೇಟಿ ಮಾಡಲಿದ್ದು, ಇದು ಬಹಳ ಮುಖ್ಯ ಕಾರ್ಯಕ್ರಮ. ನಾನು ಮಠದಲ್ಲಿ ಇರಲೇಬೇಕಾದ ಅನಿವಾರ್ಯ ಇದೆ. ಈಗಿನ ಪಾದಯಾತ್ರೆ ಹಿನ್ನೆಲೆಯಲ್ಲಿ ಕೆಲ ದಿನಗಳ ಕಾಲಾವಕಾಶ ಕೇಳುತ್ತೇನೆ. ಇಡಿ ಅಧಿಕಾರಿ ಗಳು ನಮ್ಮ ಪರಿಸ್ಥಿತಿ ಅರಿತು ಸಮ್ಮತಿಸುವ ವಿಶ್ವಾಸವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net