

ನವದೆಹಲಿ: ಗಾಂಜಾ ಮತ್ತಿನಲ್ಲಿದ್ದವನ ಕನಸಿನಲ್ಲಿ ಶಿವ ಕಾಣಿಸಿಕೊಂಡಿದ್ದು, ಬಳಿಕ ಭೀಕರ ಘಟನೆಯೊಂದು ನಡೆದಿದೆ. ಪರಿಣಾಮವಾಗಿ ಆರು ವರ್ಷದ ಬಾಲಕನೊಬ್ಬ ಅನ್ಯಾಯವಾಗಿ ಕ್ರೌರ್ಯಕ್ಕೆ ಒಳಗಾಗಿದ್ದು, ಪ್ರಾಣ ಕಳೆದುಕೊಳ್ಳುವಂತಾಗಿದೆ.
ದಕ್ಷಿಣ ದೆಹಲಿಯ ಲೋಧಿ ಕಾಲನಿಯಲ್ಲಿ ಈ ಪ್ರಕರಣ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಜಯ್ ಹಾಗೂ ಅಮರ್ ಎಂಬಿಬ್ಬರು ಆರೋಪಿಗಳು. ಆರೋಪಿಗಳು ತಾವು ತಪ್ಪು ಮಾಡಿದ್ದನ್ನು ಪೊಲೀಸ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ನಾನು ಗಾಂಜಾ ಸೇವಿಸಿದ್ದು, ಬಳಿಕ ಮಹಿಳೆಯರು ಭಜನೆ ಮಾಡುತ್ತಿದ್ದ ಸ್ಥಳಕ್ಕೆ ಹೋಗಿ ಈಶ್ವರನಿಗೆ ಪೂಜೆ ಮಾಡಲು ಅಗರಬತ್ತಿಯನ್ನು ಕೇಳಿದ್ದೆ. ಆದರೆ ಅವರು ಕೊಡಲು ನಿರಾಕರಿಸಿದರು. ಬಳಿಕ ಗುಡಿಸಲಿಗೆ ಬಂದು ಮಲಗಿದೆ. ಈ ಸಂದರ್ಭದಲ್ಲಿ ಈಶ್ವರ ನನ್ನ ಕನಸಿನಲ್ಲಿ ಬಂದಿದ್ದ ಮತ್ತು ಬಾಲಕನೊಬ್ಬನ ಬಲಿ ಕೇಳಿದ್ದ. ನಂತರ ಅಲ್ಲೇ ಒಂಟಿಯಾಗಿದ್ದ ಬಾಲಕನೊಬ್ಬನನ್ನು ಕರೆದುಕೊಂಡು ಬಂದು ಕತ್ತು ಸೀಳಿ ಬಲಿ ಕೊಟ್ಟೆವು ಎಂದು ವಿಜಯ್ ಹೇಳಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಸಿಬಿಐ ಕಟ್ಟಡ ಬಳಿ ಸಿಜಿಒ ಕಾಂಪ್ಲೆಕ್ಸ್ ಸಮೀಪದ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಸ್ಥಳದಲ್ಲಿ ಬಾಲಕನ ಕತ್ತು ಸೀಳಿ ಸಾಯಿಸಿರುವ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ತನಿಖೆಗಿಳಿದ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕ ಮಹಿಳೆ ಕೂಡ ಭಜನೆಯಲ್ಲಿ ಭಾಗಿಯಾಗಿದ್ದು, ಆಕೆ ಆ ಬಳಿಕ ಗುಡಿಸಲಿಗೆ ತೆರಳುವಾಗ ಧರ್ಮೇಂದ್ರ ನಾಪತ್ತೆಯಾಗಿದ್ದ. ಆತನನ್ನು ಈ ಆರೋಪಿಗಳು ಕರೆದೊಯ್ದು ಬಲಿಕೊಟ್ಟಿದ್ದರು. ನಾಪತ್ತೆಯಾಗಿದ್ದ ಬಾಲಕನನ್ನು ಹುಡುಕಲಾರಂಭಿಸಿದ್ದಾಗ ಆತನ ಶವ ಗುಡಿಸಲಿನಲ್ಲಿ ಪತ್ತೆಯಾಗಿತ್ತು ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.