ಭರಚುಕ್ಕಿಯಲ್ಲಿ ಪ್ರವಾಸಿಗರ ಹುಚ್ಚಾಟ: ಹಿನ್ನೀರಿನಲ್ಲಿ ಪ್ರಾಣವನ್ನೂ ಲೆಕ್ಕಿಸದೆ ಮೋಜು-ಮಸ್ತಿ

bharachukki
Published on

ಕೊಳ್ಳೇಗಾಲ: ಭರಚುಕ್ಕಿ ಜಲಪಾತದ ಹಿನ್ನೀರಿನಲ್ಲಿ ಪ್ರವಾಸಿಗರ ಹುಚ್ಚಾಟ ಜೋರಾಗಿದ್ದು, ಸಾವಿನ ದವಡೆಯಲ್ಲಿ ಮೋಜು-ಮಸ್ತಿ ಮಾಡುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಗ್ರಾಮದ ವೆಸ್ಲಿ ಸೇತುವೆ ಕೆಳಗೆ ಹರಿಯುವ ಕಾವೇರಿ ನದಿಗೆ ಇಳಿದು ಪ್ರವಾಸಿಗರು ಜಲಕ್ರೀಡೆ ಆಡುತ್ತಿದ್ದು, ಅಪಾಯದ ಮಟ್ಟದಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಮೈಮರೆಯುತ್ತಿದ್ದಾರೆ.

ವೈನಾಡು ಮತ್ತು ಮಲೆನಾಡಿನ ಪ್ರದೇಶದಲ್ಲಿ ಅತ್ಯಧಿಕ ಮಳೆಯಾಗುತ್ತಿದ್ದು, ಕಬಿನಿ ಹಾಗೂ ಕೆಆರ್​ಎಸ್ ಜಲಾಶಯ ಭರ್ತಿಯಾಗಿದೆ. ಈ ಹಿನ್ನೆಲೆ ಕಾವೇರಿ ನದಿಗೆ ಕಳೆದ ಆರು ದಿನಗಳಿಂದಲೂ ಲಕ್ಷಾಂತರ ಕ್ಯೂಸೆಕ್ ಹರಿಯ ಬೀಡುತ್ತಿದ್ದು. ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗಿದೆ.

ನದಿಯಲ್ಲಿ ನೀರು ಹೆಚ್ಚಾಗಿರುವುದನ್ನು ತಿಳಿದ ಪ್ರವಾಸಿಗರು ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳನ್ನು ವೀಕ್ಷಣೆ ಮಾಡಲು ಒಂದು ವಾರದಿಂದಲೇ ಸಾವಿರಾರು ಸಂಖ್ಯೆಯಲ್ಲಿ ಮಂದಿ ಆಗಮಿಸುತ್ತಿದ್ದರು. ಎಚ್ಚೆತ್ತ ಜಿಲ್ಲಾಡಳಿತ, ಜು.12ರಂದು ಭರಚುಕ್ಕಿ ಜಲಪಾತ ವೀಕ್ಷಣೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದೆ. ನದಿಯ ಬಳಿ ತೆರಳದಂತೆ ಮೇಲಿಂದ ಮೇಲೆ ಆದೇಶದ ಸುತ್ತೋಲೆ ಹೊರಡಿಸುತ್ತಿದೆ.

ವಿಪರ್ಯಾಸವೆಂದರೆ ಪ್ರವಾಸಿಗರು ಕಾವೇರಿ ನದಿಯಲ್ಲಿ ಇಳಿದು ಮನಬಂದಂತೆ ಆಟವಾಡುವುದು ಮತ್ತು ಈಜುವ ಹುಚ್ಚಾಟವನ್ನು‌ ಮೆರೆಯುತ್ತಿದ್ದಾರೆ. ವೀಕೆಂಡ್​ಗಳಲ್ಲಿ ಬೆಂಗಳೂರು ಸೇರಿದಂತೆ ಇನ್ನಿತರ ಕಡೆಗಳಿಂದ ತಂಡೋಪ ತಡವಾಗಿ ಬಂದು ನದಿಗಿಳಿಯುತ್ತಿದ್ದಾರೆ.

ಭರಚುಕ್ಕಿ ಪ್ರವೇಶಕ್ಕೆ ನಿರ್ಬಂಧ ಇರುವುದರಿಂದ ವೆಸ್ಲಿ ಸೇತುವೆಯಿಂದ ಬಲಗಡೆಗೆ ತೆರಳುವ ಬೂದಗಟ್ಟದೊಡ್ಡಿ ಅರಣ್ಯ ಪ್ರದೇಶದೊಳಗೆ ಅಕ್ರಮವಾಗಿ ನುಸುಳಿ ಭರಚುಕ್ಕಿ ಜಲಪಾತ ವೀಕ್ಷಣೆಗೆ ಮುಗಿ ಬೀಳುತ್ತಿದ್ದಾರೆ. ಅದರಂತೆ ಗಗನಚುಕ್ಕಿ ಸಮೀಪದ ದರ್ಗಾದ ಬಳಿ ಹರಿಯುವ ನದಿ ಬಳಿ ಹೋಗಿ ಕಾಲ ಕಳೆಯುತ್ತಾ ಆಟವಾಡುತ್ತಿದ್ದಾರೆ.

ಎಚ್ಚರ ತಪ್ಪಿದ್ರೆ ಶಿವನ ಪಾದ ಗ್ಯಾರೆಂಟಿ: ಭರಚುಕ್ಕಿ ವೀಕ್ಷಣೆಗೆ ಜಲಪಾತ ತುದಿಗೆ ತೆರಳುತ್ತಿರುವ ಯುವಕ, ಯುವತಿಯರ ಗುಂಪು ತುತ್ತ ತುದಿಯಲ್ಲಿ ನಿಂತು ಫೋಟೋ, ಸೆಲ್ಫಿ ತೆಗೆದುಕೊಳ್ಳುವ ದುಸ್ಸಾಹಸ ಪ್ರಯತ್ನದಲ್ಲಿ ಮುಳುಗಿದ್ದಾರೆ. ಯುವಕ, ಯುವತಿಯರು ಕ್ರೇಜ್​ಗೆ ಸಾಹಸ ಮಾಡುತ್ತಾರೆ ಎನ್ನಬಹುದು. ಆದರೆ, ವಯೋವೃದ್ಧರು, ಮಹಿಳೆಯರು, ಸಣ್ಣ ಸಣ್ಣ ಮಕ್ಕಳು ಸೇರಿ ಜಲಪಾತ ವೀಕ್ಷಣೆಗೆ ಆಗಮಿಸುತ್ತಿದ್ದಾರೆ.

ನದಿ, ಜಲಪಾತ ವೀಕ್ಷಣೆಗೆ ಬಂದು ಸಾವು-ನೋವುಗಳು ಸಂಭವಿಸಲು ಕಾರಣವಾಗುತ್ತಿರುವ ಪ್ರವಾಸಿಗರಿಗೆ ಕಡಿವಾಣ ಹಾಕಬೇಕು. ಅಕ್ರಮವಾಗಿ ತೆರಳಿ ಜಲಪಾತ ವೀಕ್ಷಣೆ ಮಾಡುವ ದಾರಿಯನ್ನು ಬಂದ್ ಮಾಡಿ ಪೊಲೀಸರ ನಿಯೋಜನೆ ಮಾಡಬೇಕು. ನದಿಯ ಬಳಿ ಯಾರು ಸುಳಿಯದಂತೆ ಕ್ರಮ ವಹಿಸಬೇಕು ಎಂದು ಪ್ರಜ್ಞಾವಂತರು ಒತ್ತಾಯಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net