40 ಕೋಟಿ ರೂ. ಬೆಲೆ ಬಾಳುತ್ತೆ ಈ ಸುಂದರಿಯ ತಲೆ! ಈಕೆ ಮಾಡಿದ ಭಯಾನಕ ಕೃತ್ಯವೇನು? Ruja Ignatova

Ruja Ignatova
Published on

Ruja Ignatova : ಕ್ರಿಪ್ಟೋಕರೆನ್ಸಿಗಳನ್ನು ಭವಿಷ್ಯದ ಭರವಸೆ ಎಂದು ಕರೆಯಲಾಗುತ್ತದೆ. ಆದರೆ, ಈ ಕರೆನ್ಸಿಯನ್ನು ಎಚ್ಚರಿಕೆಯಿಂದ ನಿರ್ವಹಿಸದಿದ್ದರೆ, ಬೀದಿಗೆ ಬೀಳಬೇಕಾಗುತ್ತದೆ. ಹೀಗಾಗಿಯೇ ಈ ಕ್ರಿಪ್ಟೋಕರೆನ್ಸಿಗಳು ಮಿಲಿಯನೇರ್‌ಗಳ ಜತೆಗೆ ಕೆಲ ವಿವಾದಾತ್ಮಕ ವ್ಯಕ್ತಿಗಳನ್ನು ಕೂಡ ಸೃಷ್ಟಿಸಿಬಿಡುತ್ತದೆ. ಕ್ರಿಪ್ಟೋಕರೆನ್ಸಿ ವಿಚಾರದಲ್ಲಿ ಕೊಂಚ ಯಾಮಾರಿದರು ಕೂಡ ರುಜಾ ಇಗ್ನಾಟೋವಾ ಅವರಂತಹ ಕ್ರಿಪ್ಟೋ ರಾಣಿಯರು ನಿಮ್ಮ ಕರೆನ್ಸಿಯನ್ನು ಸಂಪೂರ್ಣವಾಗಿ ನುಂಗಿಬಿಡುತ್ತಾರೆ.

ಯಾರು ಈ ರುಜಾ ಇಗ್ನಾಟೋವಾ?

ರುಜಾ ಇಗ್ನಾಟೋವಾ ಓರ್ವ ಕುಖ್ಯಾತ ಅಪರಾಧಿ. ಆಕೆಯ ತಲೆಗೆ ಅಮೆರಿಕದ ಗುಪ್ತಚರ ಸಂಸ್ಥೆ ಎಫ್‌ಬಿಐ 40 ಕೋಟಿ ರೂ.ಗಳಿಗೂ ಹೆಚ್ಚು ಬಹುಮಾನವನ್ನು ಘೋಷಿಸಿದೆ. ಕ್ರಿಪ್ಟೋ ಕ್ವೀನ್ ಎಂಬ ಅಡ್ಡ ಹೆಸರಿನಿಂದ ಕರೆಯಲ್ಪಡುವ ರುಜಾ ಒಂದು ಕಾಲದಲ್ಲಿ ಕ್ರಿಪ್ಟೋಕರೆನ್ಸಿ ಕಂಪನಿಯ ಮುಖ್ಯಸ್ಥೆಯಾಗಿದ್ದಳು. ತನ್ನ ಕಂಪನಿ ಒನ್‌ಕಾಯಿನ್ ಮೂಲಕ ನಾಲ್ಕು ಬಿಲಿಯನ್ ಡಾಲರ್‌ಗಳಿಗೂ ಹೆಚ್ಚು ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪ ಇದೆ. ಇದು ಇತಿಹಾಸದ ಅತಿದೊಡ್ಡ ಹಗರಣಗಳಲ್ಲಿ ಒಂದಾಗಿದೆ. ಹೀಗಾಗಿಯೇ ಆಕೆಯನ್ನು ಅಂತಾರಾಷ್ಟ್ರೀಯ ಕ್ರಿಮಿನಲ್ ತನಿಖಾ ಸಂಸ್ಥೆ ಎಫ್‌ಬಿಐನ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಪಟ್ಟಿಯಲ್ಲಿ ಸೇರಿಸಿದೆ. ತನಿಖೆ ನಡೆಯುತ್ತಿದ್ದರೂ, ಆಕೆಯ ಸುಳಿವು ಮಾತ್ರ ಇನ್ನೂ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.

ಶುರುವಾಗಿದ್ದು ಯಾವಾಗ?

2014ರಲ್ಲಿ, ರುಜಾ ಒನ್‌ಕಾಯಿನ್ ಎಂಬ ಕ್ರಿಪ್ಟೋ ಕರೆನ್ಸಿಯನ್ನು ಅಭಿವೃದ್ಧಿಪಡಿಸಿದರು. ಆ ಸಮಯದಲ್ಲಿ ರುಜಾಳ ಪ್ರಮುಖ ಪ್ರತಿಸ್ಪರ್ಧಿ ಬಿಟ್‌ಕಾಯಿನ್ ಆಗಿತ್ತು. ಅವರೆಲ್ಲರನ್ನೂ ಹಿಂದಿಕ್ಕುವ ಮೂಲಕ ರುಜಾ, ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಪ್ರಪಂಚದಾದ್ಯಂತ ಲಕ್ಷಾಂತರ ಜನರಿಂದ ಬಹಳ ಕಡಿಮೆ ಸಮಯದಲ್ಲಿ ಠೇವಣಿಗಳನ್ನು ಸ್ವೀಕರಿಸಿದರು. ಕಡಿಮೆ ಸಮಯದಲ್ಲಿ, ಪ್ರಪಂಚದಾದ್ಯಂತ ಮೂರು ಮಿಲಿಯನ್ ಜನರಿಂದ ಒನ್​ಕಾಯಿನ್​ ಕಂಪನಿ ಠೇವಣಿಗಳನ್ನು ಸ್ವೀಕರಿಸಿತು. ಇದು ಕಂಪನಿಯ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಹೆಚ್ಚಿಸಿತು. ಆದರೆ, ಎಲ್ಲರಿಗೂ ತಿಳಿಯುವ ಮೊದಲೇ ರುಜಾ ಕ್ರಿಪ್ಟೋಕರೆನ್ಸಿಯೊಂದಿಗೆ ಎಸ್ಕೇಪ್​ ಆದಳು. 2017 ರಲ್ಲಿ ರುಜಾ ಕಣ್ಮರೆಯಾದಳು. ಆಕೆ ಗ್ರೀಸ್‌ನಿಂದ ಗಡಿ ದಾಟಿದಳು ಎಂದು ಹೇಳಲಾಗಿದೆ. ಅವಳನ್ನು ಎಷ್ಟೇ ಹುಡುಕಿದರೂ ಸಿಗದ ಕಾರಣ, ಅಮೆರಿಕ ಬಂಧನ ವಾರಂಟ್ ಹೊರಡಿಸಿದೆ. ಆ ನಂತರದ ತನಿಖೆಗಳು ಆಕೆಯ ವಂಚನೆಯ ಬಗ್ಗೆ ಕೆಲವು ಆಘಾತಕಾರಿ ಮಾಹಿತಿಗಳನ್ನು ಬಹಿರಂಗಪಡಿಸಿದವು. ರುಜಾ, ಬಲ್ಗೇರಿಯನ್ ಮಾಫಿಯಾ ಸಹಯೋಗದೊಂದಿಗೆ ಈ ವಂಚನೆಗಳನ್ನು ಪ್ಲಾನ್​ ಮಾಡಿದ್ದಳು ಎಂಬುದು ಸ್ಪಷ್ಟವಾಗಿದೆ.

ಹೊಸ ಹೂಡಿಕೆದಾರರನ್ನು ನೇಮಕ ಮಾಡಿಕೊಳ್ಳಲು ಪ್ರೋತ್ಸಾಹಿಸುವ ಹಣದ ಸರಪಳಿಯ ಮಾದರಿಯನ್ನು ರುಜಾ ಅನುಸರಿಸಿದರು. ಹೂಡಿಕೆದಾರರನ್ನು ಆಕರ್ಷಿಸಲು, ಅವರಿಗೆ ಅಲ್ಪ ಪ್ರಮಾಣದ ಲಾಭವನ್ನೂ ನೀಡಲಾಯಿತು. ಆದ್ದರಿಂದ, ಅನೇಕ ಜನರು ರುಜಾ ಕಂಪನಿಯಲ್ಲಿ ಹೂಡಿಕೆ ಮಾಡಲು ಮುಗಿಬಿದ್ದರು. ಆಕೆಗಿದ್ದ ಉನ್ನತ ಶಿಕ್ಷಣ ಮತ್ತು ಹಣಕಾಸು ವಿಚಾರದಲ್ಲಿ ಆಕೆಗಿದ್ದ ಅಗಾಧ ಜ್ಞಾನವು ರುಜಾ ಅವರ ಬೆಳವಣಿಗೆಗೆ ವೇಗ ನೀಡಿತು. ಹಣಕಾಸಿನ ವಿಷಯಗಳಲ್ಲಿ ರುಜಾ ಅವರನ್ನು ಸೋಲಿಸುವವರು ಆ ಸಂದರ್ಭದಲ್ಲಿ ಯಾರೂ ಇರಲಿಲ್ಲ. ಇದರ ಜೊತೆಗೆ ಸೌಂದರ್ಯವು ವರದಾನವಾಯಿತು. ಅಷ್ಟೇ ಅಲ್ಲ, ಮಾತಿನಲ್ಲಿ ಮರಳು ಮಾಡುವ ಕೌಶಲವೂ ಇತ್ತು. ಇದೆಲ್ಲದರಿಂದ ಆಕೆ ಕ್ರಿಪ್ಟೋ ಕ್ವೀನ್​ ಎಂಬ ಬಿರುದು ಪಡೆದುಕೊಂಡಳು.

ಎಲ್ಲವನ್ನೂ ಚೆನ್ನಾಗಿ ಅರ್ಥಮಾಡಿಕೊಂಡ ರುಜಾ, ತಾನು ಅಂದುಕೊಂಡಿದ್ದ ಹಣ ಸಿಕ್ಕಿದೆ ಎಂದು ಸ್ಪಷ್ಟವಾದಾಗ ಕಣ್ಮರೆಯಾದಳು. ಹಲವು ತನಿಖೆಗಳ ಹೊರತಾಗಿಯೂ ರುಜಾ ಇರುವ ಸ್ಥಳ ಇನ್ನೂ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ. ಬಹುಶಃ ಅವಳು ತನ್ನ ನೋಟವನ್ನೇ ಬದಲಾಯಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ತನಿಖೆಯಿಂದ ಸಾಧ್ಯವಾಗದಿದ್ದಕ್ಕೆ ಆಕೆಯನ್ನು ಹುಡುಕಿಕೊಟ್ಟವರಿಗೆ ಕೋಟ್ಯಂತರ ರೂಪಾಯಿಗಳ ಬಹುಮಾನವನ್ನು ಘೋಷಿಸಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ಅವಳೀಗ ರಷ್ಯಾದಲ್ಲಿದ್ದಾಳೆ ಎಂಬ ವರದಿಗಳಿವೆ. ಆದರೆ, ಇದು ಖಚಿತವಾಗಿಲ್ಲ. ಆಕೆ ಕೊಲೆಯಾಗಿರಬಹುದು ಎಂಬ ಅನುಮಾನವೂ ಕೂಡ ಇದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net