

ವಿಜಯಪುರ: ಕಾಲಜ್ಞಾನಿ ಬಬಲಾದಿ ಸದಾಶಿವ ಅಜ್ಜ ನುಡಿದ ಭವಿಷ್ಯ ನಿಜವಾದ ಹಿನ್ನೆಲೆ, ಅಜ್ಜನ ದರ್ಶನ ಪಡೆಯಲು ನೂರಾರು ಭಕ್ತರು ಪ್ರಾಣವನ್ನೂ ಲೆಕ್ಕಿಸದೆ ತುಂಬಿ ಹರಿಯುತ್ತಿರುವ ಹಳ್ಳ ದಾಟಿಕೊಂಡು ಬರುತ್ತಿದ್ದಾರೆ.
ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಬಬಲಾದಿಯಲ್ಲಿರುವ ಸದಾಶಿವ ಮಠದ ಶ್ರೀ ಸಿದ್ರಾಮಯ್ಯ ಸ್ವಾಮೀಜಿ ಅವರು 3 ತಿಂಗಳ ಹಿಂದೆ, 'ಇಲ್ಲಿಗೆ ಮುಗಿಯಲಿಲ್ಲ... ಮತ್ತೆ ವ್ಯಾಧಿ ಕಾಡುತ್ತೆ. ಕರೊನಾ ಹಾವಳಿ ಕಡಿಮೆಯಾಗಲು ಮನೆಯಲ್ಲೇ ಅಂಬಲಿ, ಅನ್ನ ಪ್ರಸಾದ ಮಾಡಿ. ಮನೆಯಲ್ಲಿ ತೆಂಗಿನಕಾಯಿ ಒಡೆಯಿರಿ' ಎಂದು ಕರೊನಾ 2ನೇ ಅಲೆಯ ಬಗ್ಗೆ ಭವಿಷ್ಯ ನುಡಿದಿದ್ದರು.
ಎರಡು ಸೋಮವಾರ ಕಳೆಯುತ್ತಿದ್ದಂತೆ ಕರೊನಾ ಕೇಸ್ ಕಡಿಮೆಯಾಗಿದ್ದು, ಬಬಲಾದಿ ಸದಾಶಿವ ಅಜ್ಜನ ದರ್ಶನಕ್ಕಾಗಿ ಜನ ತಂಡೋಪತಂಡವಾಗಿ ಬರುತ್ತಿದ್ದಾರೆ. ಮಳೆಯಿಂದ ಬಿದರಿ ಹಳ್ಳದಲ್ಲಿ ತುಂಬಿ ಹರಿಯುತ್ತಿದೆ. ಇದ್ಯಾವುದನ್ನೂ ಲೆಕ್ಕಿಸದೆ ಭಕ್ತರು ನೀರಲ್ಲಿ ಇಳಿದು ಹಳ್ಳ ದಾಟಿಕೊಂಡು ಮಠದತ್ತ ಬರುತ್ತಿದ್ದಾರೆ. ಅಲ್ಲಿನ ಸಿಬ್ಬಂದಿ, ಮಠಕ್ಕೆ ಬರಬೇಡಿ, ಮನೆಯಲ್ಲಿ ಸದಾಶಿವ ಅಜ್ಜನ ಫೋಟೋಗೆ ಪೂಜೆ ಮಾಡಿ ಎಂದರೂ ಭಕ್ತರು ಕೇಳುತ್ತಿಲ್ಲ. ಹಾಗಾಗಿ ಬಬಲಾದಿ ಮಠದ ಗೇಟ್ಗೆ ಬೀಗ ಹಾಕಲಾಗಿದೆ. ಆದರೂ ಭಕ್ತರು ಹೊರಗಿನಿಂದಲೇ ದರ್ಶನ ಮಾಡ್ತೀವಿ ಎಂದು ಬರುತ್ತಿದ್ದಾರೆ.