

ಚಿತ್ರದುರ್ಗ: ಸಂಬಂಧಿಯೊಬ್ಬರ ಶವಸಂಸ್ಕಾರಕ್ಕೆಂದು ತೆರಳುತ್ತಿದ್ದವರ ಮೇಲೆ ಲಾರಿ ರೂಪದಲ್ಲಿ ಬಂದ ಜವರಾಯ ಮೂವರ ಪ್ರಾಣ ಹೊತ್ತೊಯ್ದಿದ್ದಾನೆ.
ಇಂತಹ ಭೀಕರ ಘಟನೆ ರಾ.ಹೆ. 48 ಕಾತ್ರಾಳ್ ಕೆರೆ ಸೇತುವೆ ಸಂಭವಿಸಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಜಗಳೂರು ತಾಲೂಕು ಕೆಳಗೋಟೆ ನಿವಾಸಿಗಳಾದ ಹಾಲಪ್ಪ (70), ರುದ್ರಮ್ಮ (58), ಸಣ್ಣಬಸವರಾಜಪ್ಪ(45) ಮೃತರು. ಸಂಬಂಧಿಯೊಬ್ಬರ ಶವಸಂಸ್ಕಾರಕ್ಕೆಂದು ಇವರೆಲ್ಲರೂ ಬುಧವಾರ ಮಧ್ಯಾಹ್ನ ಆಟೋದಲ್ಲಿ ತೆರಳುತ್ತಿದ್ದರು.
ಕೆಳಗೋಟೆ ಗ್ರಾಮದ 10 ಜನರಿದ್ದ ಪ್ಯಾಸೆಂಜರ್ ಆಟೋಕ್ಕೆ ಚಿತ್ರದುರ್ಗದ ಕಡೆಯಿಂದ ಬರುತ್ತಿದ್ದ ಈಚರ್ ಲಾರಿ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮೂವರಲ್ಲಿ ಹಾಲಪ್ಪ ಜಿಲ್ಲಾಸ್ಪತ್ರೆಯಲ್ಲಿ, ರುದ್ರಮ್ಮ ಬಸವೇಶ್ವರ ಆಸ್ಪತ್ರೆಯಲ್ಲಿ ಹಾಗೂ ಸಣ್ಣ ಬಸವರಾಜಪ್ಪ ಮಣಿಪಾಲ್ಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಕಲ್ಲೇಶಪ್ಪ, ಚಂದ್ರಪ್ಪ, ಪಾರ್ವತಮ್ಮ, ರುದ್ರೇಶಪ್ಪ, ಸಿದ್ದೇಶ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಲಾರಿ ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯ ಅಪಘಾತಕ್ಕೆ ಕಾರಣವಾಗಿದೆ ಎಂದು ಪ್ರಕರಣ ದಾಖಲಿಸಿರುವ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಕೆ.ಪರಶುರಾಮ, ಗ್ರಾಮಾಂತರ ಪಿಐ ಬಾಲಚಂದ್ರನಾಯಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.