

ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಬಾರದೂರಿಗೆ ಹೋಗಿ 5 ದಿನ ಕಳೆದರೂ ಕುಟುಂಬಸ್ಥರು ಮತ್ತು ಅಭಿಮಾನಿಗಳ ಮನದಲ್ಲಿ ಮಡುಗಟ್ಟಿರುವ ದುಃಖ ಮಾತ್ರ ಕಿಂಚಿತ್ತೂ ಇಳಿದಿಲ್ಲ. ಗಣ್ಯರು, ಚಿತ್ರರಂಗದವರು, ಅಭಿಮಾನಿಗಳು ನಿತ್ಯ ಅಪ್ಪು ನಿವಾಸದ ಬಳಿ ಬರುತ್ತಲೇ ಇದ್ದಾರೆ. ಅಪ್ಪು ಜತೆ ಉತ್ತಮ ಸಂಬಂಧ ಹೊಂದಿದ್ದ ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ತೇಜ ಕೂಡ ಇಂದು(ಬುಧವಾರ) ಬೆಳಗ್ಗೆ ಪುನೀತ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಅವರು ಕಾರಣಾಂತರಗಳಿಂದ ಅಪ್ಪು ಅವರ ಅಂತಿಮ ದರ್ಶನ ಪಡೆಯಲು ಬಂದಿರಲಿಲ್ಲ. ಬುಧವಾರ ಅಪ್ಪು ನಿವಾಸಕ್ಕೆ ಬಂದ ರಾಮ್ ಚರಣ್ ತೇಜ, ಕೆಲ ಕಾಲ ಪುನೀತ್ರ ಭಾವಚಿತ್ರದ ಮುಂದೆ ಮೌನವಾಗಿ ನಿಂತರು. ಬಳಿಕ ಶಿವರಾಜ್ಕುಮಾರ್ ಅವರನ್ನ, 'ಅಪ್ಪು ನಮ್ಮನ್ನ ಬಿಟ್ಟು ಹೇಗೆ ಹೋದ್ರು...' ಕೇಳುತ್ತಲೇ ಭಾವುಕರಾದರು.
ಅಪ್ಪು ನಮ್ಮ ಮನೆಗೆ ಬಂದಾಗ ನಮ್ಮನ್ನೇ ಗೆಸ್ಟ್ ತರ ನೋಡುತ್ತಿದ್ದರು. ಅಂತಹ ವ್ಯಕ್ತಿ ನಮ್ಮನ್ನ ಬಿಟ್ಟು ಹೋಗಿದ್ದಾರೆ ಅನ್ನೋದನ್ನ ನಂಬೋಕೆ ಅಗ್ತಿಲ್ಲ. ಪುನೀತ್ ಬಹಳ ಒಳ್ಳೇ ವ್ಯಕ್ತಿ ಎಂದು ರಾಮ್ ಚರಣ್ ತೇಜ ಕಣ್ಣೀರು ಹಾಕಿದ್ರು.