'ಅಪ್ಪು' ಅಗಲಿಕೆ ನೋವಿನಲ್ಲೇ ನ.10ರಂದು ಮಗಳ ಮದುವೆ... ಭಾವುಕರಾದ ಕುಮಾರ್ ಬಂಗಾರಪ್ಪ

puneethrajkumar kumar bangarappa
Published on

ಬೆಂಗಳೂರು: ಮಾಜಿ ಸಿಎಂ ದಿ. ಬಂಗಾರಪ್ಪ ಅವರ ಮೊಮ್ಮಗಳ ಮದುವೆ ನ.10ರಂದು ನಿಗದಿಯಾಗಿದೆ. ಮಗಳ ಮದುವೆ ಕಾರ್ಯಕ್ರಮದ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರ್ ಬಂಗಾರಪ್ಪ, ಅಪ್ಪುಗೆ ದೇವ್ರು ಒಂದು ಅವಕಾಶ ಕೊಡಬೇಕಿತ್ತು. ಆದ್ರೆ ದೇವರು ಅವಕಾಶ ಕೊಡಲಿಲ್ಲ. ಅಪ್ಪು ಇದ್ದಿದ್ದರೆ ಚೆನ್ನಾಗಿರುತ್ತಿತ್ತು. 46ನೇ ವಯಸ್ಸಿಗೆ ನಾವ್ ಯಾರೂ ಮಾಡದ ಸಾಧನೆಯನ್ನು ಅಪ್ಪು ಮಾಡಿದ್ದಾರೆ. ಅಪ್ಪು ಸಾವಿಗೂ ಒಂದು ವಾರದ ಮೊದಲು ನಾವೆಲ್ಲರೂ ಅವರ ಮನೆಯಲ್ಲಿ ಸೇರಿದ್ವಿ... ಆದರೆ... ಎನ್ನುತ್ತಲೇ ಕಣ್ಣೀರಿಟ್ಟರು. ದೇವ್ರು ತುಂಬಾ ಸ್ವಾರ್ಥಿ. ದೇವ್ರು ಎಲ್ಲರಿಗೂ ಅವಕಾಶಗಳನ್ನ ಕೊಡ್ತಾನೆ. ಆದರೆ ಅಪ್ಪುಗೆ ಅವಕಾಶ ಕೊಡಲೇ ಇಲ್ಲ ಎಂದು ಭಾವುಕರಾದರು.

ನನ್ನ ಮಗಳ ಮದುವೆಯನ್ನ ಒಮ್ಮೆ ಮುಂದೂಡಿದ್ದೆವು. ಇದಾದ ಬಳಿಕ ಮತ್ತೆ ನ.10ಕ್ಕೆ ದಿನಾಂಕ ನಿಗದಿ ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಅಪ್ಪು ಬಾರದ ಲೋಕಕ್ಕೆ ಹೋಗಿಬಿಟ್ಟರು. ಈ ನೋವು ಅತೀವವಾಗಿ ಕಾಡುತ್ತಿದೆ. ಮದುವೆಯನ್ನ ಮುಂದೂಡೋಣ ಅಂದುಕೊಂಡ್ವಿ. ನಿನ್ನೆ(ಮಂಗಳವಾರ) ಹಾಲು-ತುಪ್ಪ ಕಾರ್ಯವಾದ ಮೇಲೆ ವಿವಾಹ ಮಹೂರ್ತ ಮುಂದೂಡೋದು ಬೇಡ ಎಂದು ರಾಜ್​ ಕುಟುಂಬ ಹೇಳಿತು. ಅಪ್ಪು ಅವರ ವೈಕುಂಠ ಸಮಾರಾಧನೆ ಮುಗಿದ ಮೇಲೆ ಅಂದರೆ ನ.10ರಂದು ಮಗಳ ಮದುವೆ ನಡೆಯಲಿದೆ ಎಂದು ವಿವರಿಸಿದರು.

ಮಗಳ ಮದುವೆ ಸಂದರ್ಭದಲ್ಲಿ ನಮ್ಮ ಮನೆಯ ಸದಸ್ಯ ಪುನೀತ್ ಅವರು ಅಕಾಲಿಕವಾಗಿ ದೂರವಾಗಿದ್ದು ಮನಸಿಗೆ ನೋವು ಉಂಟು ಮಾಡಿದೆ ಎಂದು ಕುಮಾರ್ ಬಂಗಾರಪ್ಪ ಭಾವುಕರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net