

ಕರ್ನೂಲ್: ಸಾವು ಯಾವಾಗ? ಹೇಗೆ ಸಂಭವಿಸುತ್ತೆ? ಎಂದು ಊಹಿಸಿಕೊಳ್ಳೋಕು ಭಯವಾಗುತ್ತೆ. ಇಲ್ಲೊಬ್ಬ ಯುವಕ ಗಣೇಶ ಉತ್ಸವದಲ್ಲಿ ದೇವರ ಮುಂದೆ ಡಾನ್ಸ್ ಮಾಡುತ್ತಲೇ ಪ್ರಾಣಬಿಟ್ಟಿದ್ದಾರೆ. ಗಣೇಶೋತ್ಸವ ಸಂಭ್ರಮದಲ್ಲಿ ಮಿಂದೆದ್ದಿದ್ದ ಜನರು ಯುವಕನ ಡಾನ್ಸ್ ಮಾಡುತ್ತಿದ್ದ ದೃಶ್ಯವನ್ನ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಳ್ಳುತ್ತಲೇ ಇದ್ದರು. ನೋಡನೋಡುತ್ತಲೇ ಆತ ಮೃತಪಟ್ಟ ದೃಶ್ಯವೂ ಸೆರೆಯಾಗಿದ್ದು, ವೈರಲ್ ಆಗಿದೆ.
ಇಂತಹ ದುರ್ಘಟನೆ ಆಂಧ್ರಪ್ರದೇಶ ಅನಂತಪುರ ಜಿಲ್ಲೆಯ ಗುತ್ತಿ ಪಟ್ಟಣದ ಗೌತಮಿಪುರ ಕಾಲನಿಯಲ್ಲಿ ಸಂಭವಿಸಿದೆ. ಚರಣ್ ಅಲಿಯಾಸ್ ಕುಲ್ಲಯ್ಯಸ್ವಾಮಿ ಮೃತ ದುರ್ದೈವಿ. ಅಂದಹಾಗೆ ಈತನ ಸಾವಿಗೆ ಕಾರಣ ಏನೆಂಬುದೂ ಗೊತ್ತಾಗಿದೆ.
ಚರಣ್ ಮತ್ತು ಆತನ ಸ್ನೇಹಿತರು ಡಾನ್ಸ್ ಮಾಡುತ್ತಿದ್ದರು. ಏಕಾಏಕಿ ನೆಲಕ್ಕೆ ಕುಸಿದ ಚರಣ್ ಮೇಲೆ ಏಳಲೇ ಇಲ್ಲ. ಕೂಡಲೇ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚರಣ್ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಗಣೇಶೋತ್ಸವ ಸಂಭ್ರಮದಲ್ಲಿದ್ದ ಗ್ರಾಮಸ್ಥರಿಗೆ ಚರಣ್ ಸಾವಿನ ಸುದ್ದಿ ಆಘಾತ ಉಂಟುಮಾಡಿದೆ. ಗ್ರಾಮದಲ್ಲೀಗ ಸ್ಮಶಾನ ಮೌನ ಆವರಿಸಿದ್ದು, ಗುತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.