

ಚಿಂತಾಮಣಿ: ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಅಲವಾಟ ಗೇಟ್ ಬಳಿ ಇಂದು ಸಂಜೆ ಲಾರಿ ಹಾಗೂ ಜೀಪ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, 6 ಮಂದಿ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಹಲವರು ಗಂಭೀರ ಗಾಯಗೊಂಡಿದ್ದಾರೆ.
ತಾಡಿಗೋಳ್ ಕ್ರಾಸ್ನಿಂದ ಚಿಂತಾಮಣಿಗೆ ಪ್ರಯಾಣಿಕರನ್ನು ಕರೆತರುತ್ತಿದ್ದ ಜೀಪ್ಗೆ ಎದುರುಗಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದ್ದು, ಜೀಪ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಮೃತದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯ ಭಯ ಹುಟ್ಟಿಸುವಂತಹದ್ದು.
ಮದನಪಲ್ಲಿ-ಚಿಂತಾಮಣಿ ರಸ್ತೆಯ ಅಲವಾಟ ಗೇಟ್ ಬಳಿ ಭಾನುವಾರ ಸಂಜೆ 4ರ ವೇಳೆ ಈ ಅಪಘಾತ ಸಂಭವಿಸಿದ್ದು, ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಆಂಬುಲೆನ್ಸ್ಗೆ ಕರೆ ಮಾಡಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದವರನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮರೆದಿದ್ದಾರೆ. ಮೃತರ ಹೆಸರು ಇನ್ನೂ ತಿಳಿದು ಬಂದಿಲ್ಲ.