'ಈಗ', 'ಮೋಹಿನಿ' ಸಿನಿಮಾ ನಟಿಗೆ ಸ್ತನ ಕ್ಯಾನ್ಸರ್​: ತಾಯಿ ಕಳೆದುಕೊಂಡ ನೋವಲ್ಲಿದ್ದ ಹಂಸ ನಂದಿನಿಗೆ ಇದೆಂಥಾ ಆಘಾತ?

hamsa nandini
Published on

ಹೈದರಾಬಾದ್‌: ಸಿನಿಮಾ ನಟಿ. ಮಾಡೆಲ್​, ಡಾನ್ಸರ್​ ಹಂಸ ನಂದಿನಿ ಅವರು ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ತಲೆಯಲ್ಲಿ ಕೂದಲು ಇಲ್ಲದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಹಂಸ ನಂದಿನಿ, 'ನಾನು ಸ್ತನಕ್ಯಾನ್ಸರ್ ರೋಗಿ. 3ನೇ ಹಂತದಲ್ಲಿದೆ. 19 ವರ್ಷದ ಹಿಂದೆ ನನ್ನ ಅಮ್ಮನೂ ಕ್ಯಾನ್ಸರ್​ಗೆ ಬಲಿಯಾಗಿದ್ದರು. ಆ ನೋವು ಕಾಡುತ್ತಿರುವಾಗಲೇ ನನಗೂ ಕ್ಯಾನ್ಸರ್​ ಬಂದಿದೆ' ಎಂದು ಬರೆದುಕೊಂಡಿದ್ದಾರೆ. ಈ ಕಹಿ ಸುದ್ದಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

2004ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಹಂಸ ನಂದಿನಿ, ಟಾಲಿವುಡ್​ನ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದರು. 2006ರಲ್ಲಿ ತೆರೆಗೆ ಬಂದ ಕನ್ನಡದ 'ಮೋಹಿನಿ 9886788888' ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೂ ಕಾಲಿಟ್ಟಿದ್ದರು. ಪ್ರಭಾಸ್​ ನಟನೆಯ 'ಮಿರ್ಚಿ', ಪವನ್​ ಕಲ್ಯಾಣ್​ ಅಭಿನಯದ 'ಅತ್ತಾರಿಂಟಿಕಿ ದಾರೇದಿ' ಚಿತ್ರಗಳಲ್ಲಿ ವಿಶೇಷ ಪಾತ್ರದ ಮೂಲಕ ತೆಲುಗು ಜನರಿಗೆ ಹತ್ತಿರವಾಗಿದ್ದರು. ಸುದೀಪ್​ ಅಭಿನಯದ 'ಈಗ' ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದರು. 2018ರಲ್ಲಿ ತೆರೆಕಂಡ 'ಪಂತಂ' ಸಿನಿಮಾವೇ ಹಂಸ ನಂದಿನಿ ಅಭಿನಯದ ಕೊನೇ ಸಿನಿಮಾ. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಿಂದ ದೂರವೇ ಉಳಿದಿದ್ದ ಹಂಸ ನಂದಿನಿ, ಇಂದು(ಡಿ.20) ಬೆಳಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕ್ಯಾನ್ಸರ್​ ಬಗ್ಗೆ ವಿವರಿಸಿದ್ದಾರೆ.

'ಕಳೆದ 4 ತಿಂಗಳ ಹಿಂದೆ ಎದೆಯಲ್ಲಿ ಗಂಟು ಕಾಣಿಸಿಕೊಂಡಿತ್ತು. ವೈದ್ಯರ ಬಳಿ ಪರೀಕ್ಷಿಸಿದಾಗ ಸ್ತನ ಕ್ಯಾನ್ಸರ್​ 3ನೇ ಹಂತದಲ್ಲಿ ಇರುವುದು ಗೊತ್ತಾಯಿತು. ನನ್ನ ತಾಯಿಯೂ 40 ವರ್ಷ ವಯಸ್ಸಿಗೇ ಅಂದರೆ 19 ವರ್ಷಗಳ ಹಿಂದೆ ಕ್ಯಾನ್ಸರ್​ನಿಂದ ಮೃತಪಟ್ಟಿದ್ದರು. ಅಮ್ಮನನ್ನು ಕಳೆದುಕೊಂಡ ನೋವು ಕಾಡುತ್ತಲೇ ಇದೆ. ಇದೀಗ ನನಗೂ ಕ್ಯಾನ್ಸರ್​ ಬಂದಿದೆ. ಈಗಾಗಲೇ 9 ಬಾರಿ ಕಿಮೋಥೆರಪಿಗೆ ಒಳಗಾಗಿದ್ದೇನೆ. ಇನ್ನೂ 7 ಬಾರಿ ಕಿಮೋಥೆರಪಿ ಮಾಡಿಸಿಕೊಳ್ಳಬೇಕು' ಎಂದು ಹಂಸ ನಂದಿನಿ ವಿವರಿಸಿದ್ದಾರೆ.

'ಮಹಾಮರಿ ಕ್ಯಾನ್ಸರ್​ಗೆ ನನ್ನ ಬದುಕು ಬಲಿಯಾಗಲು ನಾನು ಬಯಸುವುದಿಲ್ಲ. ನಗುತ್ತಲೇ ಧೈರ್ಯದಿಂದ ಕ್ಯಾನ್ಸರ್​ ವಿರುದ್ಧ ಹೋರಾಡುವೆ. ಗುಣಮುಖವಾಗಿ ಮತ್ತೊಮ್ಮೆ ನಿಮ್ಮ ಮುಂದೆ ಬರುತ್ತೇನೆ. ನನ್ನ ಕಥೆ ಎಲ್ಲರಿಗೂ ಸ್ಫೂರ್ತಿಯಾಗಲಿ' ಎಂದು ಬರೆದುಕೊಂಡಿದ್ದಾರೆ. ನೋವಿನಲ್ಲೂ ಹಂಸ ನಂದಿನಿಯ ಸ್ಫೂರ್ತಿದಾಯಕ ಮಾತು ನೋಡಿದ ಅಭಿಮಾನಿಗಳು ಭಾವುಕರಾಗಿದ್ದಾರೆ. ಶೀಘ್ರವೇ ಗುಣಮುಖವಾಗಿ ಎಂದು ಹಾರೈಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net