ಟ್ರೆಂಡ್​ ಆಯ್ತು ಮದ್ವೆ ಆಹ್ವಾನ ಪತ್ರಿಕೆಯಲ್ಲಿ ಅಪ್ಪು ಫೋಟೋ: ಪುನೀತ್​ ಅಗಲಿಕೆ ನೋವಲ್ಲೂ ಹೆಚ್ಚುತ್ತಿದೆ ಅಭಿಮಾನ

New Project (1)
Published on

ವಿಜಯನಗರ: ನಟ ಪುನೀತ್​ ರಾಜ್​ಕುಮಾರ್ ಭೂತಾಯಿಯ ಮಡಿಲು ಸೇರಿ ಒಂದೂವರೆ ತಿಂಗಳು ಕಳೆದರೂ ಅವರ ಮೇಲಿನ ಅಭಿಮಾನ ಮಾತ್ರ ಹೆಚ್ಚುತ್ತಲೇ ಇದೆ. ಅಪ್ಪುಗಾಗಿ ಕನ್ನಡಿಗರ ಮನ ಮಿಡಿಯುತ್ತಿದ್ದು, ಒಬ್ಬೊಬ್ಬರು ಒಂದೊಂದು ರೀತಿ ಅಪ್ಪುಗೆ ಗೌರವ ಸಲ್ಲಿಸುತ್ತಾ, ತಮ್ಮ ಬದುಕಲ್ಲಿ ಪುನೀತ್​ ನೆನಪನ್ನು ಶಾಶ್ವತವಾಗಿಸಿಕೊಳ್ಳುತ್ತಿದ್ದಾರೆ. ಕೆಲವರು ತಮ್ಮ ಮಕ್ಕಳಿಗೆ ಅಪ್ಪು ಎಂದು ಹೆಸರು ಇಡುತ್ತಿದ್ದರೆ, ಮತ್ತೆ ಹಲವರು ಮನೆಯಲ್ಲಿ 'ಜೊತೆಗಿರದ ಜೀವ ಎಂದಿಗಿಂತ ಜೀವಂತ’ ಎಂಬ ಅಡಿಬರಹವುಳ್ಳ ಪುನೀತ್​ ಫೋಟೋ ಇಟ್ಟು ಪೂಜಿಸುತ್ತಿದ್ದಾರೆ. ಇದೀಗ ಮದ್ವೆ ಆಮಂತ್ರಣ ಪತ್ರಿಕೆಗಳಲ್ಲೂ ಅಭಿಮಾನಿಗಳು ಅಪ್ಪು ಫೋಟೋ ಹಾಕಿಕೊಂಡು ನಮಿಸುತ್ತಿದ್ದಾರೆ.

ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಪುರದ ಶ್ರೀ ಸಿದ್ದ ವೀರೇಶ ಕಲ್ಯಾಣ ಮಂಟಪದಲ್ಲಿ ಹನುಮಂತಪ್ಪ ಮತ್ತು ನಯನ, ನಾಗರಾಜ ಮತ್ತು ಚೈತ್ರಾ ಎಂಬುವರ ಮದುವೆ ನಡೆಯಲಿದೆ. ಈ ಎರಡೂ ಜೋಡಿಗಳು ಒಂದೇ ಕಲ್ಯಾಣಮಂಟಪದಲ್ಲಿ ಒಂದೇ ದಿನ ದಾಪಂತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರು ತಮ್ಮ ಲಗ್ನಪತ್ರಿಕೆಯಲ್ಲಿ ಪುನೀತ್ ರಾಜ್​ಕುಮಾರ್​ ಫೋಟೋ ಜತೆಗೆ “ಜೊತೆಗಿರುವ ಜೀವ ಎಂದೆಂದಿಗೂ ಜೀವಂತ” ಎಂಬ ಬರಹವನ್ನು ಹಾಕಿಸಿಕೊಂಡು ಅಪ್ಪು ಮೇಲಿನ ಅಭಿಮಾನ ಮೆರೆದಿದ್ದಾರೆ.

ಹನುಮಂತಪ್ಪ ಪೊಲೀಸ್​ ಪೇದೆಯಾಗಿದ್ದು, ಪುನೀತ್​ರಾಜ್​ಕುಮಾರ್​ರ ಅಪ್ಪಟ ಅಭಿಮಾನಿ. ಇವರನ್ನು ಕೈಹಿಡಿಯುತ್ತಿರುವ ನಯನಾಗೂ ಪುನೀತ್​ ಅಂದ್ರೆ ತುಂಬಾ ಇಷ್ಟ. ಇನ್ನು ನಾಗರಾಜ ಮತ್ತು ಚೈತ್ರಾ ಜೋಡಿ ಸೇರಿ ಇಡೀ ಕುಟುಂಬಸ್ಥರೂ ಅಪ್ಪು ಅಭಿಮಾನಿಗಳು. ಪುನೀತ್​ ಅಗಲಿಕೆಯಿಂದ ತುಂಬಾ ನೊಂದುಕೊಂಡಿದ್ದ ಕುಟುಂಬಸ್ಥರು ಮಕ್ಕಳ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪುನೀತ್​ ಫೋಟೋ ಹಾಕಿಸಲು ಸಮ್ಮತಿಸಿದ್ದಾರೆ. ಕರ್ನಾಟಕದ ಹೆಮ್ಮೆಯ ರಾಜಕುಮಾರ ಅಪ್ಪು ಅವರ ಆಶೀರ್ವಾದ ನಮ್ಮ ಮಕ್ಕಳ ಮೇಲಿರಲಿ ಎಂದಿದ್ದಾರೆ.

ಇತ್ತೀಚಿಗೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹೊಸೂರು ಗ್ರಾಮದಲ್ಲಿ‌ ಶ್ರೀಧರ ಹಾಗೂ ಸವಿತಾ ಎಂಬುವರೂ ತಮ್ಮ ಮದುವೆ ಲಗ್ನಪತ್ರಿಕೆಯಲ್ಲಿ ಪುನೀತ್ ರಾಜ್​ಕುಮಾರ್​ ಫೋಟೋ ಜತೆಗೆ “ಜೊತೆಗಿರುವ ಜೀವ ಎಂದೆಂದಿಗೂ ಜೀವಂತ. ಅಪ್ಪು ಅಮರ” ಎಂಬ ಬರಹವನ್ನು ಹಾಕಿಸಿಕೊಂಡಿದ್ದರ ಫೋಟೋ ವೈರಲ್​ ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net