

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಊಹಾಪೋಹದಿಂದ ತೀವ್ರ ಸಂಚಲನ ಸೃಷ್ಟಿಸಿರುವ ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಿ, ತಪ್ಪಿತಸ್ಥರನ್ನ ಯಾವುದೇ ಕಾರಣಕ್ಕೂ ರಕ್ಷಿಸಲ್ಲ ಎಂದು ಸಾರಿದ್ದಾರೆ.
ಆರ್‌ಟಿ ನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಶುಕ್ರವಾರ ಮಾತನಾಡಿದ ಸಿಎಂ, ಯಾರೋ ಪ್ರಭಾವಿಗಳನ್ನು ರಕ್ಷಿಸಲು ಕೇಸ್ ಮುಚ್ಚಿ ಹಾಕಲು ಪ್ರಯತ್ನಿಸಿದ್ದರೆ, ಹೆಚ್ಚಿನ ತನಿಖೆಗಾಗಿ ಇಡಿ ಹಾಗೂ ಸಿಬಿಐನ ಇಂಟರ್‌ಪೋಲ್ ಶಾಖೆಗೆ ಶಿಫಾರಸು ಮಾಡಲಾಗುತ್ತಿತ್ತೇ? ಎಂದು ಮರು ಪ್ರಶ್ನಿಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಸೂತ್ರವಿಲ್ಲದ ಗಾಳಿಪಟ ಹಾರಿಸುವುದನ್ನ ಬಿಟ್ಟು, ಬಿಟ್‌ಕಾಯಿನ್ ವಹಿವಾಟಿಗೆ ಸಂಬಂಧಿಸಿದಂತೆ ಸಣ್ಣ ಸಾಕ್ಷ್ಯ ಅಥವಾ ಪುರಾವೆಯಿದ್ದರೆ ನೀಡಲಿ ಎಂದು ‘ಬೊಮ್ಮಾಯಿ ಸವಾಲೆಸೆದರು.
ರಾಜಕೀಯ ಪ್ರೇರಿತ, ಹತಾಶೆಯಿಂದ ಕೂಡಿದ ಆರೋಪವಾಗಿದೆ. ಬಿಜೆಪಿ ಮೇಲೆ ಗೂಬೆ ಕೂರಿಸಿ ರಾಜ್ಯದ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ, ಬೇರೆ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಗಳಲ್ಲಿ ದುರ್ಬಳಕೆಗೆ ಸಂಚು ಹೂಡಿದೆ ಎಂದು ಕಿಡಿಕಾರಿದರು.
ತಿರುಗು ಬಾಣ: ಬಿಜೆಪಿ ವಿರುದ್ಧ ಹುರುಳಿಲ್ಲದ ಆರೋಪಕ್ಕೆ ಮುಂದಾಗಿರುವ ಕಾಂಗ್ರೆಸ್‌ನವರಿಗೆ ಈ ಪ್ರಕರಣ ತಿರುಗುಬಾಣವಾಗಲಿದೆ. ಯಾವುದೇ ಸ್ಪಷ್ಟತೆಯಿಲ್ಲ, ಯಾರಿಂದ ಯಾರಿಗೆ ಹಣದ ವ್ಯವಹಾರ ನಡೆದಿದೆ ಎಂಬ ಮಾಹಿತಿಯಿಲ್ಲ. ಮೊದಲಿಗೆ ಕಾಂಗ್ರೆಸ್ ಮಿತ್ರರು ವಿವರ ಕಲೆಹಾಕಿ ಹೇಳಿಕೆ ನೀಡುವುದು ಒಳಿತು ಎಂದು ಬೊಮ್ಮಾಯಿ ಕುಟುಕಿದರು
ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ವಿರುದ್ಧ 2019ರ ಜುಲೈನಲ್ಲಿ ಮನಿ ಲಾಂಡರಿಂಗ್, ಬಿಟ್ ಕಾಯಿನ್ ಒಳಗೊಂಡು ಹ್ಯಾಕಿಂಗ್ ಮತ್ತು ಡ್ರಗ್ಸ್‌ಗೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಒಂದು ಪ್ರಕರಣದಲ್ಲಿ ಸಿಸಿಬಿ ತನಿಖೆ ಮುಗಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಮತ್ತೊಂದು ಪ್ರಕರಣದ ತನಿಖೆಯನ್ನು ಸಿಐಡಿ ಮುಂದುವರಿಸಿದೆ. ಇದೇ ಶ್ರೀಕೃಷ್ಣ 2018ರ ಫೆಬ್ರವರಿಯಲ್ಲಿ ಯುಬಿ ಸಿಟಿ ದಾಂಧಲೆ ಪ್ರಕರಣವೊಂದರ ಆರೋಪಿಯಾಗಿದ್ದ. ಆದರೆ ಆತನನ್ನು ಬಂಧಿಸಲಿಲ್ಲ, ವಿಚಾರಣೆ ಕೂಡಲಿಲ್ಲ ನಡೆಸಲಿಲ್ಲ ಎಂದು ಬೊಮ್ಮಾಯಿ ದೂರಿದರು.