

ಅಬುಜಾ (ನೈಜೀರಿಯಾ): 85 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ನೈಜರ್ ನದಿಯಲ್ಲಿ ಮಗುಚಿ 76 ಜನರು ಜಲಸಮಾಧಿಯಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇಂತಹ ಭೀಕರ ದುರಂತ ನೈಜೀರಿಯಾದ ಅನಂಬ್ರಾ ರಾಜ್ಯದಲ್ಲಿ ಭಾನುವಾರ ಸಂಭವಿಸಿದೆ.
ಒಗ್ಬಾರು ಪ್ರದೇಶದಲ್ಲಿ ಭೀಕರ ಪ್ರವಾಹ ಉಂಟಾಗಿದೆ. ಹಾಗಾಗಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯಾಚರಣೆ ನಡಯುತ್ತಿದೆ. ಭಾನುವಾರ ಪ್ರವಾಹ ಸಂತ್ರಸ್ತರನ್ನು ಹೊತ್ತೊಯ್ಯುತ್ತಿದ್ದ ದೋಣಿಯು ನದಿಯ ಅಲೆಗೆ ಸಿಲುಕಿ ಮಗುಚಿದೆ. ಇನ್ನು ಈ ದೋಣಿಯಲ್ಲಿ ಸಾಮಾರ್ಥ್ಯಕ್ಕಿಂತ ಹೆಚ್ಚು ಜನರು ಹತ್ತಿಕೊಂಡಿದ್ದರಿಂದ ಓವರ್ಲೋಡ್ ಆಗಿತ್ತು ಎನ್ನಲಾಗಿದೆ.
ದೋಣಿ ದುರಂತ ಕುರಿತು ತೀವ್ರ ವಿಷಾದ ವ್ಯಕ್ತಪಡಿಸಿರುವ ನೈಜೀರಿಯಾ ಅಧ್ಯಕ್ಷ ಮುಹಮ್ಮದ್ ಬುಹಾರಿ, "ಇದೊಂದು ಅತ್ಯಂತ ನೋವಿನ ಸಂಗತಿ. ಮೃತರ ಆತ್ಮಕ್ಕೆ ಶಾಂತಿ ಕೋರುವೆ. ದೋಣಿ ದುರಂತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುವೆ. ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಸ್ಥರಿಗೆ ದೇವರು ನೀಡಲಿ. ಇನ್ನು ನಾಪತ್ತೆಯಾದವರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ. ನಾಪತ್ತೆಯಾಗಿರುವವರು ಕ್ಷೇಮವಾಗಿ ಬರಲಿ' ಎಂದು ಟ್ವೀಟ್ ಮಾಡಿದ್ದಾರೆ.