

ನವದೆಹಲಿ: ಉತ್ತರಾಖಂಡದಲ್ಲಿ ಲೋಕೋ ಪೈಲಟ್‌ನ ಜಾಗರೂಕತೆಯಿಂದ ಮತ್ತೊಂದು ರೈಲು ಅವಘಡ ತಪ್ಪಿದೆ. ಬಿಲಾಸ್‌ಪುರ್ ಹಾಗೂ ರುದ್ರಪುರ ನಡುವೆ ಸಂಚರಿಸುತ್ತಿದ್ದ ನೈನಿ ಜನ ಶತಾಬ್ದಿ ಎಕ್ಸ್‌ಪ್ರೆಸ್‌ಗೆ ಅಡ್ಡಲಾಗಿ ಕೆಲವು ಕಿಡಿಗೇಡಿಗಳು 6 ಮೀಟರ್ ಉದ್ದದ ಕಬ್ಬಿಣದ ಕಂಬವನ್ನು ಹಳಿಯ ಮೇಲೆ ಇಟ್ಟಿದ್ದರು. ಇದು ಗಮನಕ್ಕೆ ಬಾರದೇ ಹೋಗಿದ್ದರೆ ಭಾರಿ ದುರಂತವೇ ಸಂಭವಿಸುತ್ತಿತ್ತು. ಆದರೆ, ಲೋಕೋ ಪೈಲಟ್‌ನ ಸಮಯ ಪ್ರಜ್ಞೆಯಿಂದ ದುರಂತ ತಪ್ಪಿದೆ.
ಭಾರತೀಯ ರೈಲ್ವೇ ಅಧಿಕಾರಿಗಳ ಪ್ರಕಾರ, ರೈಲು ಸಂಖ್ಯೆ 12091ರ ಲೋಕೋ ಪೈಲಟ್, ಹಳಿಯ ಮೇಲೆ ಕಬ್ಬಿಣದ ಕಂಬ ಬಿದ್ದಿರುವುದನ್ನು ದೂರದಿಂದಲೇ ಗಮನಿಸಿ, ತಕ್ಷಣ ತುರ್ತು ಬ್ರೇಕ್ ಹಾಕಿ ರೈಲು ನಿಲ್ಲಿಸಿ, ಭಾರಿ ದುರಂತವನ್ನು ತಪ್ಪಿಸಿದ್ದಾರೆ. ರೈಲು ನಿಲ್ಲಿಸಿದ ಬಳಿಕ ಕಬ್ಬಿಣದ ಕಂಬವನ್ನು ತೆರವುಗೊಳಿಸಿ, ತಮ್ಮ ಪ್ರಯಾಣವನ್ನು ಮುಂದುವರಿಸಿದರು ಎಂದು ತಿಳಿದುಬಂದಿದೆ.
ಈ ಬಗ್ಗೆ ಮೊರಾದಾಬಾದ್ ವಿಭಾಗದ ರೈಲ್ವೇ ಪೊಲೀಸ್ ವರಿಷ್ಠಾಧಿಕಾರಿ ಅಶುತೋಷ್ ಶುಕ್ಲಾ ಮಾತನಾಡಿ, ನಿನ್ನೆ (ಸೆ.18) ರಾತ್ರಿ 10.18ಕ್ಕೆ ನೈನಿ ಜನ ಶತಾಬ್ದಿ ರೈಲು ರಾಂಪುರದಿಂದ ರುದ್ರಾಪುರ ನಗರಕ್ಕೆ ಹೋಗುತ್ತಿದ್ದಾಗ ರುದ್ರಾಪುರ ಸಿಟಿ ಸ್ಟೇಷನ್‌ನಿಂದ ಸುಮಾರು 1.5 ರಿಂದ 2 ಕಿಮೀ ಮುಂದೆ ಹಳಿಗಳ ಮೇಲೆ ಹಳೆಯ ವಿದ್ಯುತ್ ಕಂಬ ಅಡ್ಡಲಾಗಿ ಬಿದ್ದಿರುವುದು ಕಂಡುಬಂದಿದೆ. ಲೋಕೋ ಪೈಲಟ್ ತುರ್ತು ಬ್ರೇಕ್‌ಗಳನ್ನು ಅಳವಡಿಸಿ, ರೈಲನ್ನು ನಿಲ್ಲಿಸಿ, ಕಂಬವನ್ನು ಸ್ಥಳದಿಂದ ತೆಗೆದು ಹಾಕಿದರು ಎಂದು ಜಿಆರ್‌ಪಿ ರಾಂಪುರ ಆರ್‌ಪಿಎಫ್‌ನಿಂದ ಮೆಮೊ ಸ್ವೀಕರಿಲಾಯಿತು ಎಂದರು.
ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ), ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿಗಳು ಕಂಬ ಪತ್ತೆಯಾದ ಸ್ಥಳವನ್ನು ಪರಿಶೀಲಿಸಿದ್ದಾರೆ. ಒಂದು ಬದಿಯಲ್ಲಿ ಪೊದೆಗಳು ಮತ್ತು ಇನ್ನೊಂದೆಡೆ ಕಾಡು ಇರುವುದು ಕಂಡುಬಂದಿದೆ. ಕಂಬವನ್ನು ಅಲ್ಲಿ ಮರೆಮಾಡಿ, ನಂತರ ಹಳಿಗಳ ಮೇಲೆ ಎಳೆಯಲಾಗಿದೆ ಎಂದು ಎಸ್‌ಪಿ ಅಶುತೋಷ್ ಶುಕ್ಲಾ ಹೇಳಿದರು.
ಈ ಘಟನೆಯಿಂದ ಬೇರೆ ಯಾವುದೇ ರೈಲುಗಳ ಕಾರ್ಯಾಚರಣೆಗೆ ತೊಂದರೆಯಾಗಿಲ್ಲ ಎಂದು ಅಶುತೋಷ್ ಶುಕ್ಲಾ ತಿಳಿಸಿದ್ದಾರೆ. ರೈಲು ರಾತ್ರಿ 9.38 ರ ಸುಮಾರಿಗೆ ಕತ್ಗೊಡಮ್ ಅನ್ನು ದಾಟಿತು ಮತ್ತು ರಾತ್ರಿ 10.05 ರ ಸುಮಾರಿಗೆ ಘಟನಾ ಸ್ಥಳವನ್ನು ತಲುಪಿತು. ಈ ವೇಳೆ 15 ರಿಂದ 20 ನಿಮಿಷಗಳ ಸಮಯದಲ್ಲಿ ಮಾತ್ರ ಕಂಬವನ್ನು ಟ್ರ್ಯಾಕ್‌ಗೆ ತಳ್ಳಲಾಗಿದೆ ಎಂದು ಅಶುತೋಷ್ ಶುಕ್ಲಾ ತಿಳಿಸಿದರು.
ಅಧಿಕಾರಿಗಳ ಪ್ರಕಾರ, ರುದ್ರಾಪುರ ಸಿಟಿ ಸೆಕ್ಷನ್ ರೈಲ್ವೇ ಇಂಜಿನಿಯರ್ ರಾಜೇಂದ್ರ ಕುಮಾರ್ ಅವರ ದೂರಿನ ಮೇರೆಗೆ 1989ರ ರೈಲ್ವೆ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಅನಾಮಧೇಯ ವ್ಯಕ್ತಿಗಳ ವಿರುದ್ಧ ಜಿಆರ್‌ಪಿ ಪೊಲೀಸ್ ಠಾಣೆ ರಾಂಪುರದಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ. (ಏಜೆನ್ಸೀಸ್)