

ಮನಿಲಾ: 92 ವಿದೇಶಿಗರನ್ನು ಹೊತ್ತೊಯ್ಯುತ್ತಿದ್ದ ಸೇನಾ ವಿಮಾನವೊಂದು ದಕ್ಷಿಣ ಫಿಲಿಪೈನ್ಸ್ನ ಜೊಲೋ ದ್ವೀಪದಲ್ಲಿ ಪತನಗೊಂಡಿದ್ದು, ಮೃತರ ಸಂಖ್ಯೆ 47ಕ್ಕೇರಿದೆ.
ಫಿಲಿಪೈನ್ ವಾಯುಪಡೆಯ ಸಿ-130 ವಿಮಾನ ಜೊಲೋ ದ್ವೀಪದಲ್ಲಿ ಭಾನುವಾರ ಲ್ಯಾಂಡಿಂಗ್ ಆಗುವ ವೇಳೆ ಅಪಘಾತಕ್ಕೀಡಾಗಿದ್ದು, 47 ಮಂದಿ ಸಾವನ್ನಪ್ಪಿದ್ದಾರೆ. 49 ಮಿಲಿಟರಿ ಸಿಬ್ಬಂದಿ ಗಾಯಗೊಂಡಿದ್ದು, ಆಸ್ಪತ್ತೆಗೆ ದಾಖಲಿಸಲಾಗಿದೆ ಎಂದು ಮಿಲಿಟರಿ ಮುಖ್ಯಸ್ಥ ಸಿರಿಲಿಟೊ ಸೊಬೆಜಾನಾ ಸೋಮವಾರ ತಿಳಿಸಿದ್ದಾರೆ.
ದಂಗೆಕೋರರ ಕಾರ್ಯಾಚರಣೆಗೆ ಹೊರಟ ಸೈನ್ಯವನ್ನು ಹೊತ್ತುಕೊಂಡು ಬಂದ ಸಿ-130 ವಿಮಾನ ಸುಲು ಪ್ರಾಂತ್ಯದ ಜೊಲೋ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಬೇಕಿತ್ತು, ಈ ವೇಳೆ ದುರಂತ ಸಂಭವಿಸಿದ್ದು, ವಿಮಾನ ಸ್ಫೋಟಗೊಂಡು ಭಗ್ನಾವಶೇಷಗಳೂ ಸುಟ್ಟು ಕರಕಲಾಗಿವೆ.
ವಿಮಾನದಲ್ಲಿದ್ದವರಲ್ಲಿ ಅನೇಕರು ಇತ್ತೀಚೆಗಷ್ಟೇ ಮಿಲಿಟರಿ ತರಬೇತಿ ಪಡೆದು ಬಂದವರಾಗಿದ್ದರು. ಭಯೋತ್ಪಾದಕ ಚಟುವಟಿಕೆ ಹೆಚ್ಚು ಇರುವ ದಕ್ಷಿಣ ಭಾಗದಲ್ಲಿ ಉಗ್ರರ ವಿರುದ್ಧ ಹೋರಾಡುತ್ತಿರುವ ಜಂಟಿ ಕಾರ್ಯ ಪಡೆಗೆ ಇವರನ್ನ ನಿಯೋಜಿಸಲಾಗಿತ್ತೆನ್ನಲಾಗಿದೆ.
ರಾಜಧಾನಿ ಮನಿಲಾದ ದಕ್ಷಿಣಕ್ಕೆ ಸುಮಾರು 950 ಕಿ.ಮೀ (600 ಮೈಲಿ) ದೂರದಲ್ಲಿರುವ ಸುಲು ಉಗ್ರಗಾಮಿ ಅಬು ಸಯ್ಯಫ್ ಗುಂಪಿನ ಭದ್ರಕೋಟೆಯಾಗಿದ್ದು, ದರೋಡೆಕೋರ ಮತ್ತು ಕಡಲ್ಗಳ್ಳತನಕ್ಕೆ ಕುಖ್ಯಾತಿ ಪಡೆದಿದೆ.