22 ಅಡಿ ಎತ್ತರದ ಆಕರ್ಷಕ ಗಣಪ

bdvt ganapa (1)
ಭದ್ರಾವತಿ ಕಣಕಟ್ಟೆ ಗ್ರಾಮದಲ್ಲಿ ಪ್ರತಿಷ್ಠಾಪಿಸಿರುವ 22 ಅಡಿ ಎತ್ತರದ ಗಣಪತಿ ಮೂರ್ತಿ.
Published on

ಭದ್ರಾವತಿ: ತಾಲೂಕಿನ ಕಣಕಟ್ಟೆ ಗ್ರಾಮದಲ್ಲಿ ಶ್ರೀ ಮಹಾಮಾರಿಯಮ್ಮ ಸೇವಾ ಸಮಿತಿ ಪ್ರತಿಷ್ಠಾಪಿಸಿರುವ 22 ಅಡಿ ಎತ್ತರದ ಗಣಪತಿ ಮೂರ್ತಿ ಆಕರ್ಷಕವಾಗಿದ್ದು ಭಕ್ತರನ್ನು ಸೆಳೆಯುತ್ತಿದೆ.

ಈ ಬಾರಿಯ ಗಣಪತಿ ಪ್ರತಿಷ್ಠಾಪನೆಯಲ್ಲಿ ತಾಲೂಕಿನಲ್ಲಿಯೇ ಅತಿ ಎತ್ತರದ ಗಣಪತಿ ಮೂರ್ತಿ ಇದಾಗಿದ್ದು, ಇದನ್ನು ಬೆಂಗಳೂರಿನಿಂದ ತರಲಾಗಿದೆ. ತಾಲೂಕಿನ ಚನ್ನಗಿರಿ ರಸ್ತೆ ಕಣಕಟ್ಟೆ ಗ್ರಾಮದಲ್ಲಿ ಯುವಕರು, ಗ್ರಾಮಸ್ಥರು ಒಟ್ಟುಗೂಡಿ ಮುಖ್ಯ ರಸ್ತೆ ಬದಿಯಲ್ಲಿ ಪ್ರತಿಷ್ಠಾಪಿಸಿದ್ದಾರೆ. ಆ ರಸ್ತೆಯಲ್ಲಿ ಪ್ರಯಾಣಿಸುವ ನಾಗರಿಕರು, ವಾಹನ ಸವಾರರು ಒಮ್ಮೆ ನಿಂತು ಕೈಮುಗಿದು ಸಂಚರಿಸುತ್ತಿದ್ದಾರೆ.
ಬೆಂಗಳೂರಿನ ನಾಗಸಂದ್ರದಿಂದ ಭದ್ರಾವತಿಗೆ ತರಲಾಗಿರುವ 22 ಅಡಿ ಎತ್ತರದ ಈ ಗಣಪತಿ ಮೂರ್ತಿಯ ವೆಚ್ಚ 1.50 ಲಕ್ಷ ರೂಪಾಯಿ. ಇದನ್ನು ತರಲು ವ್ಯಯವಾಗಿರುವ ಖರ್ಚು 1 ಲಕ್ಷ ರೂಪಾಯಿ. ಇಂತಹ ದೊಡ್ಡ ಗಣಪತಿಯನ್ನು ಸುಮಾರು 350 ಕೀ.ಮೀ ದೂರದಿಂದ ತಂದು ಪ್ರತಿಷ್ಠಾಪಿಸಿರುವ ಇಲ್ಲಿನ ಯುವಕರ, ಗ್ರಾಮಸ್ಥರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. 1.50 ಟನ್ ತೂಕವಿರುವ ಈ ಗಣಪತಿ ಮೂರ್ತಿಯನ್ನು ಐಷರ್ ವಾಹನದಲ್ಲಿ ಬೆಂಗಳೂರಿನಿಂದ ಭದ್ರಾವತಿಗೆ ರಾಷ್ಟ್ರೀಯ ಹೆದ್ದಾರಿ ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ, ಚಿಕ್ಕಜಾಜೂರು ಮಾರ್ಗವಾಗಿ ಚನ್ನಗಿರಿ ತಾಲೂಕಿನ ದೇವರಹಳ್ಳಿ ಮೂಲಕ ತರಲಾಗಿದೆ. ಮಾರ್ಗದಲ್ಲಿ ಎದುರಾದ ವಿದ್ಯುತ್ ತಂತಿಗಳು, ಗ್ರಾಮಗಳ ದ್ವಾರಬಾಗಿಲುಗಳು, ಮರದ ಟೊಂಗೆಗಳು, ಎಲ್ಲವನ್ನೂ ಅಲ್ಲಿನ ಸ್ಥಳೀಯರ ನೆರವಿನಿಂದ ನಿಭಾಯಿಸಿಕೊಂಡು ಇಲ್ಲಿಗೆ ತಂದಿರುವುದು ಸಾಹಸದಂತಾಗಿದೆ ಎನ್ನುತ್ತಾರೆ ಗ್ರಾಮ ಸಮಿತಿಯ ಪ್ರಮುಖ ಅಜಯ್.
ಬೃಹದಾಕಾರದ ಗಣಪತಿ ಮೂರ್ತಿಯನ್ನು ಅ.5ರವರೆಗೆ ಪ್ರತಿಷ್ಠಾಪಿಸಿ, 6ರಂದು ಊರಿನ ಬೀದಿಯಲ್ಲಿ ಮೆರವಣಿಗೆ ನಡೆಸಲಾಗುವುದು. ನಂತರ ಗೊಂದಿ ನಾಲೆಯಲ್ಲಿ ವಿಸರ್ಜಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net