

ಬೆಂಗಳೂರು: ಮಾನದಂಡ ಉಲ್ಲಂಘಿಸಿ ಪಡೆದ 91,061 ಬಿಪಿಎಲ್ ಕಾರ್ಡ್ಗಳು ರದ್ದಾಗಿವೆ. ಆದಾಯ ತೆರಿಗೆ ಪಾವತಿದಾರರು, ವಾರ್ಷಿಕ 1.20 ಲಕ್ಷ ರೂ.ಗಿಂತ ಹೆಚ್ಚಿರುವವರು, ಸರ್ಕಾರಿ ನೌಕರರು, ಮೃತ ಫಲಾನುಭವಿಗಳು ಹಾಗೂ 6 ತಿಂಗಳಿಂದ ಪಡಿತರ ಪಡೆಯದ ಕಾರ್ಡ್ ಗಳನ್ನು ಗುರುತಿಸಿದ ಆಹಾರ ಇಲಾಖೆ, 2023-24ರಲ್ಲಿ 74,342 ಹಾಗೂ 2024-25ರಲ್ಲಿ 16,719 ಚೀಟಿಗಳನ್ನು ರದ್ದುಪಡಿಸಿದೆ. ಹ್ಯೂಮನ್ ರಿಸೋರ್ಸ್ ಮ್ಯಾನೇಜ್ವೆುಂಟ್ ಸಿಸ್ಟಂ (ಎಚ್ಆರ್ಎಂಎಸ್) ಮಾಹಿತಿ ಆಧರಿಸಿ 5 ಸಾವಿರಕ್ಕೂ ಅಧಿಕ ಸರ್ಕಾರಿ ನೌಕರರು ಪಡೆದಿದ್ದ ಬಿಪಿಎಲ್ ರದ್ದುಪಡಿಸಲಾಗಿದೆ. ಈ ನೌಕರರಿಗೆ ನೋಟಿಸ್ ಜಾರಿ ಮಾಡಿ ಸೇವೆಗೆ ಸೇರಿದ ದಾಖಲೆ ಹಾಗೂ ಮತ್ತಿತರ ಮಾಹಿತಿಗಳನ್ನು ಸಲ್ಲಿಸಲು ತಿಳಿಸಿದೆ.
ಈ ಮಾಹಿತಿ ಪರಿಶೀಲಿಸಿ ಈವರೆಗೆ ಪಡೆದಿರುವ ಪಡಿತರದ ಪ್ರಮಾಣ, ಮಾರುಕಟ್ಟೆ ಮೌಲ್ಯ ನಿಗದಿಪಡಿಸಿ ದಂಡ ಪಾವತಿಸುವಂತೆ ನಿರ್ದೇಶನ ನೀಡಲಾಗುತ್ತದೆ. ಅನೇಕರು ತಪ್ಪು ಒಪ್ಪಿಕೊಂಡು ದಂಡ ಪಾವತಿ ಮಾಡುತ್ತಿದ್ದಾರೆ. ಬೋಗಸ್ ಪಡಿತರ ಚೀಟಿ ಪಡೆದ ಬಹುತೇಕ ನೌಕರರು 8-10 ವರ್ಷದಿಂದ ನಿರಂತರ ಬಿಪಿಎಲ್ ಕಾರ್ಡ್ನಡಿ ಪಡಿತರ ಪಡೆಯುತ್ತಿರುವುದೂ ಗೊತ್ತಾಗಿದೆ. ಐಟಿ ಇಲಾಖೆ ನೀಡಿರುವ ಪಟ್ಟಿ ಆಧರಿಸಿ ಆದಾಯ ತೆರಿಗೆ ಪಾವತಿಸುತ್ತಿರುವ ಅಂದಾಜು 18-20 ಸಾವಿರ ಕಾರ್ಡ್ಗಳು ರದ್ದಾಗಿದೆ. ಆದರೆ, ಇದರಲ್ಲಿ ಯಾರು ಅರ್ಹರು, ಯಾರು ಅರ್ಹರಲ್ಲ ಎಂಬುದನ್ನು ದೃಢೀಕರಿಸಲು ಅಧಿಕಾರಿಗಳು ಪ್ರಯಾಸಪಡುತ್ತಿದ್ದಾರೆ. ಕೆಲವರು ಮೇಲ್ನೋಟಕ್ಕೆ ಕಾರ್ಡ್ ಪಡೆಯಲು ಅರ್ಹರೆಂದು ಕಾಣಿಸುತ್ತಿದ್ದಾರೆ. ಮತ್ತೆ ಕೆಲವರು ಆರ್ಥಿಕ ಸುಸ್ಥಿತಿಯಲ್ಲಿದ್ದು ದಾಖಲೆ ಕೊಡುತ್ತಿಲ್ಲ. ಹಾಗಾಗಿ, ಐಟಿ ಪಾವತಿಸುವವರ ವಿರುದ್ಧ ಶಿಸ್ತು ಕ್ರಮಕ್ಕೆ ಕಗ್ಗಂಟಾಗಿದೆ.