90 ಸಾವಿರ ಹೊಸ ಪ್ರಕರಣ; ಕರೊನಾ ಸೋಂಕಿನಲ್ಲಿ ಭಾರತ ಮತ್ತೊಂದು ದಾಖಲೆ

Covid
Published on

ನವದೆಹಲಿ: ಕರೊನಾ ಬಾಧಿತ ದೇಶಗಳ ಪಟ್ಟಿಯಲ್ಲಿ ಬ್ರೆಜಿಲ್​ನ್ನು ಹಿಂದಿಕ್ಕಿ ಭಾರತ ಎರಡನೇ ಸ್ಥಾನಕ್ಕೆ ಏರಿದ ಬೆನ್ನಲ್ಲೇ, ಶನಿವಾರ ಒಂದೇ ದಿನ 90 ಸಾವಿರ ಹೊಸ ಕರೊನಾ ಪ್ರಕರಣ ಬೆಳಕಿಗೆ ಬಂದಿದೆ. ಇದು ಈವರೆಗಿನ ದಾಖಲೆಯಾಗಿದೆ.

ಇದುವರೆಗೆ ಯಾವ ದೇಶದಲ್ಲಿಯೂ ಒಂದೇ ದಿನದಲ್ಲಿ 90 ಸಾವಿರ ಪ್ರಕರಣ ಕಾಣಿಸಿಕೊಂಡಿರಲಿಲ್ಲ. 24 ಗಂಟೆಗಳಲ್ಲಿ 1,065 ಜನರು ಮೃತರಾಗಿದ್ದು, ದೇಶದಲ್ಲಿ ಕರೊನಾದಿಂದ ಮೃತಪಟ್ಟವರ ಸಂಖ್ಯೆ 20 ಸಾವಿರಕ್ಕೂ ಅಧಿಕವಾಗಿದೆ. ಮಹಾರಾಷ್ಟ್ರ, ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಶೇ. 62 ಪ್ರಕರಣ ಇದೆ. ಗುಣಮುಖ ಪ್ರಮಾಣವೂ ಹೆಚ್ಚಳವಾಗಿದ್ದು, ಶೇ. 77.31ಕ್ಕೆ ಏರಿಕೆಯಾಗಿದೆ. ಶೇ. 20.96 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳು ಗುಣಮುಖ ಪ್ರಮಾಣದಲ್ಲಿ ಶೇ. 60 ಪಾಲನ್ನು ಹೊಂದಿವೆ. ಮರಣ ಪ್ರಮಾಣವು ಶೇ. 1.72ಕ್ಕೆ ಇಳಿಕೆಯಾಗಿದೆ. ಕೇವಲ ಶೇ.0.5 ಸೋಂಕಿತರು ವೆಂಟಿಲೇಟರ್​ನಲ್ಲಿದ್ದಾರೆ. ಶೇ. 3.5 ಸೋಂಕಿತರು ಆಕ್ಸಿಜನ್ ಸಹಾಯ ಪಡೆದಿದ್ದು, ಶೇ. 2 ಸೋಂಕಿತರು ತೀವ್ರ ನಿಗಾ ಘಟಕದಲ್ಲಿದ್ದಾರೆ.

ದೇಶದಲ್ಲಿ ಈವರೆಗೆ 41.31 ಲಕ್ಷಕ್ಕೂ ಅಧಿಕ ಮಂದಿಗೆ ಕರೊನಾ ಸೋಂಕು ದೃಢವಾಗಿದೆ. ಇದೀಗ ಮೂರನೇ ಸ್ಥಾನಕ್ಕಿಳಿದಿರುವ ಬ್ರೆಜಿಲ್​ನಲ್ಲಿ 41.23 ಲಕ್ಷ ಜನರು ಸೋಂಕಿಗೆ ತುತ್ತಾಗಿದ್ದಾರೆ. ಮೊದಲನೇ ಸ್ಥಾನದಲ್ಲಿರುವ ಅಮೆರಿಕದಲ್ಲಿ 64.32 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಸಾವಿನ ಸಂಖ್ಯೆಯಲ್ಲಿ ಅಮೆರಿಕ 1.92 ಲಕ್ಷ ಮೃತರೊಂದಿಗೆ ಮೊದಲನೇ ಸ್ಥಾನದಲ್ಲಿದ್ದರೆ, 1.26 ಲಕ್ಷ ಮೃತರೊಂದಿಗೆ ಬ್ರೆಜಿಲ್ ಎರಡನೇ ಸ್ಥಾನ ಮತ್ತು 70,800 ಮೃತರೊಂದಿಗೆ ಭಾರತ ಮೂರನೇ ಸ್ಥಾನದಲ್ಲಿದೆ. ಭಾರತದಲ್ಲಿ ಜನವರಿ ಅಂತ್ಯದಲ್ಲಿ ಮೊದಲ ಕರೊನಾ ಪ್ರಕರಣ ಪತ್ತೆಯಾಗಿದ್ದು, ಜುಲೈ 16ಕ್ಕೆ ಸೋಂಕಿತರ ಸಂಖ್ಯೆ 10 ಲಕ್ಷದ ಗಡಿ ದಾಟಿತ್ತು. ಆಗಸ್ಟ್ 6ಕ್ಕೆ 20 ಲಕ್ಷ ಗಡಿ ದಾಟಿತ್ತು. ಆಗಸ್ಟ್ 22ಕ್ಕೆ 30 ಲಕ್ಷ ದಾಟಿದ್ದು ಅದಾದ ನಂತರ ಸೋಂಕಿನ ಪ್ರಮಾಣದಲ್ಲಿ ಭಾರೀ ಏರಿಕೆ ಉಂಟಾಗಿತ್ತು. ಕೇವಲ 13 ದಿನಗಳಲ್ಲಿ (ಸೆ.4) 10 ಲಕ್ಷಕ್ಕೂ ಅಧಿಕ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 40 ಲಕ್ಷವನ್ನು ದಾಟಿದೆ.

ದೇಶದ ಹಲವೆಡೆ ಕರೊನಾ ಎರಡನೇ ಅಲೆ: ದೇಶದ ಹಲವು ರಾಜ್ಯಗಳಲ್ಲಿ ಕರೊನಾ ಎರಡನೇ ಅಲೆ ಆರಂಭವಾಗಿದೆ ಎಂದು ದೆಹಲಿಯ ಏಮ್್ಸ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ತಿಳಿಸಿದ್ದಾರೆ. ದೇಶದ ಜನರು ಸೋಂಕಿನಿಂದ ಬೇಸತ್ತಿದ್ದು, ಮುಂಜಾಗ್ರತಾ ಕ್ರಮಗಳನ್ನು ಕಡಿಮೆ ಮಾಡಿದ್ದಾರೆ. ಅದೇ ಕಾರಣದಿಂದಾಗಿ ಕೆಲ ರಾಜ್ಯಗಳಲ್ಲಿ ಸೋಂಕಿನ ಎರಡನೇ ಅಲೆ ಆರಂಭವಾಗಿದೆ. 2021ರ ಪ್ರಾರಂಭದಲ್ಲಿ ಸೋಂಕು ಕಡಿಮೆಯಾಗಿ, ದೇಶ ಸೋಂಕು ಮುಕ್ತವಾಗಬಹುದು ಎಂದು ಅವರು ಹೇಳಿದ್ದಾರೆ. ಪ್ರತಿ ದಿನ 10 ಲಕ್ಷಕ್ಕೂ ಅಧಿಕ ಮಂದಿಗೆ ಪರೀಕ್ಷೆ ಮಾಡುತ್ತಿರುವುದದರಿಂದಾಗಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.

25 ಲಕ್ಷ ಭಾರತೀಯರು ವಾಪಸ್: ಕರೊನಾ ಬಿಕ್ಕಟ್ಟಿನ ಕಾರಣದಿಂದಾಗಿ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಆರಂಭಿಸಲಾದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಈವರೆಗೆ 15 ಲಕ್ಷಕ್ಕೂ ಅಧಿಕ ಭಾರತೀಯರು ವಿದೇಶಗಳಿಂದ ವಾಪಾಸಾಗಿದ್ದಾರೆ ಎಂದು ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ತಿಳಿಸಿದ್ದಾರೆ. 2020ರ ಮೇ 6ರಂದು ಯೋಜನೆಯನ್ನು ಆರಂಭಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ 4.5 ಲಕ್ಷಕ್ಕೂ ಅಧಿಕ ಮಂದಿ ವಿಶೇಷ ವಿಮಾನಗಳಲ್ಲಿ ಭಾರತಕ್ಕೆ ಮರಳಿದ್ದಾರೆ. ಜಲಮಾರ್ಗ ಮತ್ತು ಭೂ ಮಾರ್ಗ ಸೇರಿ ಒಟ್ಟು 15 ಲಕ್ಷ ಜನರನ್ನು ವಾಪಾಸು ಕರೆತರಲಾಗಿದೆ ಎಂದು ಅವರು ಟ್ವಿಟರ್​ನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net