

ನವದೆಹಲಿ: ಮ್ಯಾನ್ಮಾರ್ನಿಂದ ಸುಮಾರು 900 ಬುಡಕಟ್ಟು ಉಗ್ರಗಾಮಿಗಳ ಮಣಿಪುರ ರಾಜ್ಯಕ್ಕೆ ಒಳನುಸುಳಿರುವ ಸಾಧ್ಯತೆ ಇದೆ ಎಂದು ಮಣಿಪುರ ಸಿಎಂ ಬಿರೇನ್ ಸಿಂಗ್ ಅವರ ಕಚೇರಿಯಿಂದ ಪೊಲೀಸರಿಗೆ ಮಾಹಿತಿ ರವಾನೆಯಾಗಿದೆ. ಇವರೆಲ್ಲರೂ ಡ್ರೋನ್, ಸ್ಪೋಟಕಗಳು ಮತ್ತು ಕ್ಷಿಪಣಿಗಳ ಬಳಕೆ ತರಬೇತಿ ಪಡೆದಿದ್ದಾರೆ. ಸೆಪ್ಟೆಂಬರ್ 28ರೊಳಗೆ ಇಂಫಾಲ್ ಕಣಿವೆಯ ಗ್ರಾಮಗಳ ಮೇಲೆ ಸಂಘಟಿತ ದಾಳಿ ನಡೆಸಲು ಯೋಜಿಸುತ್ತಿದ್ದಾರೆ ಎಂದು ರಾಜ್ಯದ ಭದ್ರತಾ ಸಲಹೆಗಾರ ಕುಲ್ದೀಪ್ ಸಿಂಗ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಣಿಪುರ ಪೊಲೀಸ್ ಮತ್ತು ಅಸ್ಸಾಂ ರೈಫಲ್ಸ್ನ ಗಡಿ ಘಟಕಗಳಲ್ಲಿ ಗರಿಷ್ಠ ಕಟ್ಟೆಚ್ಚರ ವಹಿಸಲಾಗಿದೆ.
ಯುನಿಫೈಡ್ ಕಮಾಂಡ್ನ ಅಧ್ಯಕ್ಷರೂ ಆಗಿರುವ ಕುಲ್ದೀಪ್ ಸಿಂಗ್, ಹೊಸದಾಗಿ ತರಬೇತಿ ಪಡೆದ 900 ಉಗ್ರಗಾಮಿಗಳ ವರದಿ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 18ರಂದು ಕಾರ್ಯತಂತ್ರದ ಕಾರ್ಯಾಚರಣೆಗಳ ಗುಂಪಿನ ಸಭೆ ನಡೆಸಲಾಗಿದೆ. ಸಭೆಯಲ್ಲಿ ಅಸ್ಸಾಂ ರೈಫಲ್ಸ್ನ ಇನ್ಸ್ಪೆಕ್ಟರ್ ಜನರಲ್ಗಳು (ಐಜಿಎಆರ್ ದಕ್ಷಿಣ ಮತ್ತು ಪೂರ್ವ), 57 ಮೌಂಟೆನ್ ಡಿವಿಷನ್, ಬಿಎಸ್ಎಫ್ ಮುಖ್ಯಸ್ಥರು, ಸಿಆರ್ಪಿಎಫ್ ಐಜಿ, ಪೊಲೀಸ್ ಮಹಾನಿರ್ದೇಶಕರು, ಮಣಿಪುರ ಡಿಜಿ, ಗೃಹ ಕಮಿಷನರ್ ಮತ್ತು ಇತರ ಹಿರಿಯ ಭದ್ರತಾ ಅಧಿಕಾರಿಗಳು ಸೇರಿದಂತೆ ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದರು ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಶಾಂತಿ ಮತ್ತು ಸ್ಥಿರತೆ ಖಚಿತಪಡಿಸಿಕೊಳ್ಳಲು ಭದ್ರತಾ ಪಡೆಗಳು ನಿಕಟ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ. ಚುರಾಚಂದ್ಪುರ, ತೆಂಗ್ನೌಪಾಲ್, ಕಾಮ್ಾಂಗ್, ಉಖ್ರುಲ್ ಮತ್ತು ಫರ್ಜಾಲ್ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮ ಜಾರಿಗೊಳಿಸಲಾಗಿದೆ. ಕೇಂದ್ರ ಪಡೆಗಳು ಸ್ಥಳೀಯರು ಮತ್ತು ನಾಗರಿಕ ಸಮಾಜದ ಮುಖಂಡರೊಂದಿಗೆ ನಿರಂತರ ಸಂವಹನ ನಡೆಸುತ್ತಿವೆ ಎಂದು ಹೇಳಿದ್ದಾರೆ.