

ಬೆಂಗಳೂರು: ಹೈಕೋರ್ಟ್‌ನ (High Court) ವಿಚಾರಣೆಯ ವೇಳೆ ನೀಡಿರುವ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಪ್ರಮಾಣಿಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ (judge) ವೇದವ್ಯಾಸಾಚಾರ್ ಶ್ರೀಶಾನಂದ (Vedavyasachar Srishananda) ಅವರು ಹೇಳಿದ್ದಾರೆ.
23ನೇ ವಿಚಾರಣಾ ಹಾಲ್ನಲ್ಲಿ ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಇತರ ವಕೀಲರ ಎದುರು ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ಅವರು ತಮ್ಮ ಹೇಳಿಕೆಗಳಿಗೆ ವಿವರಣೆ ನೀಡಿದರು.
ಬೆಂಗಳೂರಿನ ಮುಸ್ಲಿಮರು ಹೆಚ್ಚಿರುವ ಪ್ರದೇಶಕ್ಕೆ ಪಾಕಿಸ್ತಾನ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಶ್ರೀಶಾನಂದ ವಿರುದ್ಧ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು, ಅಲ್ಲದೇ ಶುಕ್ರವಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ಕೈಗೆತ್ತಿಕೊಂಡಿತ್ತು. ಜತೆಗೆ, ಆರೋಪ ಸಂಬಂಧ ಹೈಕೋರ್ಟ್ ರಿಜಿಸ್ಟ್ರಾರ್ರಿಂದ ವರದಿ ಕೇಳಿತ್ತು. ಈ ಹೇಳಿಕೆಯ ಬಗ್ಗೆ ವರದಿ ನೀಡುವಂತೆ ಸೂಚನೆ ಕೊಟ್ಟಿದೆ. ಇದರ ಬೆನ್ನಲ್ಲೇ ಶ್ರೀಶಾನಂದ ತಮ್ಮ ಆಕ್ಷೇಪಾರ್ಹ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಗೋರಿಪಾಳ್ಯದಲ್ಲಿನ ಕ್ರಿಮಿನಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಾರೆ. ಮೈಸೂರು ರಸ್ತೆಯ ಫ್ಲೈಓವರ್‌ನಲ್ಲಿ ನೋಡಿದರೆ ಪ್ರತಿ ಆಟೋ ರಿಕ್ಷಾದಲ್ಲಿಯೂ ಹತ್ತು ಜನರನ್ನು ತುಂಬಿಸಿರುತ್ತಾರೆ. ಮೈಸೂರು ರಸ್ತೆಯ ಮೇಲ್ಸೇತುವೆ ಸಾಗುವ ಗೋರಿಪಾಳ್ಯದಿಂದ ಮಾರುಕಟ್ಟೆವರೆಗಿನ ಪ್ರದೇಶ ಭಾರತದಲ್ಲಿ ಇಲ್ಲ. ಅದು ಪಾಕಿಸ್ತಾನದಲ್ಲಿದೆ. ಇದು ವಾಸ್ತವ " ಎಂದು ಹೇಳಿದ್ದರು.
ನ್ಯಾಯಮೂರ್ತಿ ಶ್ರೀಶಾನಂದ ಅವರು ಪಾಕಿಸ್ತಾನ ಹೇಳಿಕೆ ನೀಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.