900 ಕೋಟಿ ರೂಪಾಯಿ ಪರಿಹಾರ ಪ್ರಸ್ತಾವನೆ, ಕೇಂದ್ರಕ್ಕೆ ರವಾನೆ..

Vidhanasoudha vvani
Published on

ಬೆಂಗಳೂರು: ಅತಿವೃಷ್ಟಿಯಲ್ಲಿ 900 ಕೋಟಿ ರೂ. ಪರಿಹಾರ ಕೇಳಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ಎನ್​ಡಿಆರ್​ಎಫ್ ಹಣವನ್ನು ಮೂರು ಪಟ್ಟು ಹೆಚ್ಚಿಸುವಂತೆ ಸಲಹೆ ನೀಡಲಾಗಿದೆ. ಮುಖ್ಯಮಂತ್ರಿಗಳೂ ಪರಿಹಾರ ವಿಚಾರವಾಗಿ ಸಭೆ ಮಾಡಿದ್ದಾರೆ. ಮನೆ ಬಿದ್ದವರಿಗೆ ತಕ್ಷಣ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಳೆ ನೀರು ಮನೆಗೆ ನುಗ್ಗಿದವರಿಗೂ ಪರಿಹಾರ ವಿತರಣೆ ಮಾಡಲಾಗುತ್ತಿದೆ. ಕಾಫಿ ಸೇರಿ ಎಲ್ಲ ಬೆಳೆಗಳಿಗೂ ಪರಿಹಾರ ನೀಡಲಾಗುವುದು ಎಂದರು. ರಾಜ್ಯಕ್ಕೆ ಮತ್ತೊಂದು ಸೈಕ್ಲೋನ್ ಬೀಸಲಿದ್ದು, ನ.26,27,28ರಂದು ಅಗತ್ಯ ಮುಂಜಾಗ್ರತೆ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ. ವಿಧಾನಪರಿಷತ್ ಚುನಾವಣೆ ನಾಮಪತ್ರ ಸಲ್ಲಿಕೆ ಆಗಿದೆ. ಇನ್ನೇನಿದ್ದರೂ ಮತದಾನ, ಹಾಗಾಗಿ ಅಧಿಕಾರಿಗಳಿಗೆ ಸೈಕ್ಲೋನ್ ಕಡೆ ಗಮನ ನೀಡುವಂತೆ ತಿಳಿಸಲಾಗಿದೆ ಎಂದು ಅಶೋಕ್ ತಿಳಿಸಿದರು.

ಹೆಚ್ಚಿನ ಪರಿಹಾರಕ್ಕೆ ಸಿಎಂ ಜತೆ ಚರ್ಚೆ

ಶಿವಮೊಗ್ಗ: ಅಕಾಲಿಕ ಮಳೆಯಿಂದ ಸಂಭವಿಸಿರá-ವ ಹಾನಿಗೆ 500 ರಿಂದ 600 ಕೋಟಿ ರೂ. ಪರಿಹಾರ ಘೊಷಣೆ ಮಾಡಲಾಗಿದೆ. ಇಷ್ಟಾದರೂ ರೈತರು ಸಂಕಷ್ಟದಲ್ಲಿರá-ವುದು ಗಮನದಲ್ಲಿದ್ದು, ಹೆಚ್ಚಿನ ಪರಿಹಾರ ಬಿಡá-ಗಡೆಗೆ ಸಿಎಂ ಬಸವರಾಜ ಬೊಮ್ಮಾಯಿ ಜತೆ ಚರ್ಚೆ ಮಾಡá-ತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ ಮಳೆಹಾನಿ ಪ್ರದೇಶಗಳಿಗೆ ಸಚಿವರು ಪ್ರವಾಸ ಕೈಗೊಂಡಿಲ್ಲ ಎಂದು ಪ್ರತಿಪಕ್ಷಗಳು ಮನೆಯಲ್ಲಿ ಕುಳಿತು ಟೀಕೆ ಮಾಡುತ್ತಿವೆ. ಆದರೆ ಬಿಜೆಪಿ ಶಾಸಕರು ಮತ್ತು ಸಚಿವರು ಪ್ರವಾಸ ಕೈಗೊಂಡು ಸಂಕಷ್ಟಕ್ಕೀಡಾದವರನ್ನು ಭೇಟಿ ಮಾಡಿ ಸಂತೈಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್-ಜೆಡಿಎಸ್ ಮುಖಂಡರಿಗೆ ತಿರá-ಗೇಟು ನೀಡಿದರು.

50 ಸಾವಿರ ರೂಪಾಯಿ ಗಡಿ ತಲುಪಿದ ಚಾಲಿ

ಶಿರಸಿ: ನಿರಂತರ ಮಳೆ ಕಾರಣಕ್ಕೆ ಹೊಸ ಅಡಕೆ ಉತ್ಪಾದನೆ ಕುಂಠಿತವಾಗಿದೆ. ಹೀಗಾಗಿ ಚಾಲಿ ಅಡಕೆ ದರ ಕ್ವಿಂಟಾಲ್ ಒಂದಕ್ಕೆ 50 ಸಾವಿರ ಗಡಿ ದಾಟಿದೆ. ಇದು ಅಡಕೆ ಬೆಳೆಗಾರರಲ್ಲಿ ಹೊಸ ಉತ್ಸಾಹಕ್ಕೆ ಕಾರಣವಾಗಿದೆ. ಕಳೆದ 15 ದಿನಗಳಿಂದ ದರ ನಿರಂತರ ತೇಜಿ ಆಗುತ್ತ ಗುರುವಾರ ಇಲ್ಲಿನ ಟಿಎಸ್​ಎಸ್ ವ್ಯಾಪಾರಿ ಅಂಗಳದಲ್ಲಿ ಕ್ವಿಂಟಾಲ್ ಒಂದಕ್ಕೆ ಕನಿಷ್ಠ 48089, ಗರಿಷ್ಠ 50099 ರೂ. ಲಭಿಸಿದೆ. ಬುಧವಾರ ಪ್ರತಿ ಕ್ವಿಂಟಾಲ್ ಚಾಲಿಗೆ 49,808 ದರ ಲಭಿಸಿದ್ದು, ಸರಾಸರಿ 49,297 ಲಭಿಸಿತ್ತು. ಆರೆಂಟು ತಿಂಗಳ ಅವಧಿಯಲ್ಲಿ ಚಾಲಿ ಅಡಕೆ -ಠಿ;44-45 ಸಾವಿರ ಆಸುಪಾಸು ದರಕ್ಕೆ ಮಾರಾಟವಾಗುತ್ತಿತ್ತು.

ನಿತ್ಯ ಪಾವತಿಗೆ ಕ್ರಮ, ಸಿಎಂ ಭರವಸೆ

ರಾಜ್ಯದಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ರಾಗಿ, ಜೋಳ, ಭತ್ತ, ಶೇಂಗಾ ಹಾಗೂ ತರಕಾರಿ ಸೇರಿ ಹಲವಾರು ಬೆಳೆಗಳು ನಾಶವಾಗಿದೆ. ಪ್ರಥಮ ಬಾರಿಗೆ ಬೆಳೆ ಹಾನಿ ಸರ್ವೆಯಾಗಿ ಆಪ್​ನಲ್ಲಿ ಅಪ್​ಲೋಡ್ ಆದ ತಕ್ಷಣವೇ ರೈತರ ಖಾತೆಗೆ ನೇರವಾಗಿ ಪರಿಹಾರದ ಹಣ ಜಮೆಯಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ರೈತರ ಖಾತೆಗೆ ನಿತ್ಯ ಪಾವತಿ ಹಾಗೂ ಹಣ ಕೊರತೆಯಾದರೆ ತಕ್ಷಣ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಕಂದಾಯ ಕಾರ್ಯದರ್ಶಿಗಳಿಗೆ ತಿಳಿಸಲಾಗಿದೆ ಎಂದರು. ಸಂಕಷ್ಟದಲ್ಲಿರುವ ರೈತರಿಗೆ ಬೆಳೆ ಪರಿಹಾರವನ್ನು ತಕ್ಷಣ ನೀಡಲು ಎಲ್ಲ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ ಎಂದರು.

ಇಬ್ಬರು ರೈತರ ಆತ್ಮಹತ್ಯೆ

ಅಕಾಲಿಕ ಮಳೆಗೆ ಬೆಳೆ ನೆಲಕಚ್ಚಿದ್ದಕ್ಕೆ ಬೇಸರಗೊಂಡ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರಿನ ಸಿದ್ದಪ್ಪ(60), ನ್ಯಾಮತಿ ತಾಲೂಕು ಆರುಂಡಿಯ ಷಣ್ಮುಖಪ್ಪ (47) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ದಪ್ಪರ 2 ಎಕರೆ ಭತ್ತದ ಬೆಳೆ ಸಂಪೂರ್ಣ ಹಾನಿಯಾಗಿತ್ತು. 2 ಲಕ್ಷ ರೂ. ಸಾಲ ಮಾಡಿದ್ದರು. ಈರುಳ್ಳಿ ಸೇರಿ ವಿವಿಧ ತರಕಾರಿ ಬೆಳೆದಿದ್ದ ಷಣ್ಮುಖಪ್ಪ, ಬ್ಯಾಂಕ್​ನಲ್ಲಿ 5 ಲಕ್ಷ ರೂ. ಸಾಲ ಮಾಡಿದ್ದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net