

ನ್ಯೂಯಾರ್ಕ್: ಅಮೆರಿಕದ ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ 90 ಅಡಿ ಎತ್ತರದ ಹನುಮಂತನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ನಾಲ್ಕು ದಿನಗಳ ಕಾಲ ವಿಶೇಷ ಪೂಜೆಯನ್ನು ಸಲ್ಲಿಸಿ ಆಗಸ್ಟ್ 18ರಂದು ಮೂರ್ತಿ ಪ್ರತಿಷ್ಠಾಪನೆಯನ್ನು ಮಾಡಲಾಯಿತು.
ಹೂಸ್ಟನ್ ನಗರದ ಅಷ್ಟಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ 90 ಅಡಿಯ ಈ ಆಂಜಯನೇ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದ್ದು, ಈ ಪ್ರತಿಮೆಗೆ ಒಕ್ಕೂಟದ ಪ್ರತಿಮೆ ಎಂದು ಹೆಸರಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಚಿನಜೀಯರ್ ಸ್ವಾಮಿಗಳ ನೇತೃತ್ವದಲ್ಲಿ ಆಯೋಜಿಸಿದ್ದ ಉತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಭಾರತೀಯ ಸಂಸ್ಕೃತಿ ಸಂಪ್ರದಾಯಗಳನ್ನು ಬಿಂಬಿಸುವ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಈ ವೇಳೆ ಆಯೋಜಿಸಲಾಗಿತ್ತು. ಪ್ರತಿಮೆ ಅನಾವರಣ ಸಂದರ್ಭದಲ್ಲಿ ಹೆಲಿಕಾಪ್ಟರ್ ಮೂಲಕ ಪ್ರತಿಮೆಗೆ ಪುಷ್ಪವೃಷ್ಠಿ ಮಾಡಲಾಯಿತು. ಸ್ಥಳದಲ್ಲಿ ಜೈ ವೀರ ಹನುಮಾನ್ ಘೋಷಣೆ ಮೊಳಗಿದವು. ಈ ವೇಳೆ ಅಮೆರಿಕದ ಹಿಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಟೆಕ್ಸಾಸ್‌ನಲ್ಲಿರುವ 90 ಅಡಿ ಎತ್ತರ ಹನುಮಂತನ ಪ್ರತಿಮೆ ಯುಎಸ್‌ನಲ್ಲಿ ವಿಶೇಷ ಮನ್ನಣೆ ಗಳಿಸಿದೆ. ಇದು ಅಮೆರಿಕದ ಮೂರನೇ ಅತಿ ಎತ್ತರದ ಪ್ರತಿಮೆಯಾಗಿದೆ. ಅಲ್ಲದೆ, ಉತ್ತರ ಅಮೆರಿಕಾದ ಅತಿ ಎತ್ತರದ ಪ್ರತಿಮೆ ಎಂದು ಗುರುತಿಸಲ್ಪಟ್ಟಿದೆ. ಪ್ರತಿಮೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜೈ ಹನುಮಾನ್ ಕಾಮೆಂಟ್ಗಳು ಹರಿದುಬರುತ್ತಿವೆ.
ಇದೇ ವೇಳೆ 2020ರಲ್ಲಿ ಡೆಲವೇರ್ನಲ್ಲಿ 25 ಅಡಿ ಎತ್ತರದ ಹನುಮಂತನ ಮೂರ್ತಿ ಪ್ರತಿಷ್ಠಾಪಿಸಿರುವುದು ಗೊತ್ತೇ ಇದೆ. ಈ ಪ್ರತಿಮೆಯನ್ನು ತೆಲಂಗಾಣದ ವಾರಂಗಲ್‌ನಿಂದ ಪ್ರತಿಮೆಯನ್ನು ಸಾಗಿಸಲಾಗಿತ್ತು. (ಏಜೆನ್ಸೀಸ್)